ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಹೆಚ್ಚಿರುತ್ತದೆ. ಆದ್ರೆ ಈ ಬಾರಿ ಹಬ್ಬದ ಋತುವಿನಲ್ಲೂ ಆಟೋಮೊಬೈಲ್ ಕಂಪನಿಗಳು ಲಾಭ ಕಂಡಿಲ್ಲ. ಚಿಪ್ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ.
ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಜಾಗತಿಕ ಚಿಪ್ ಕೊರತೆ, ಆಟೋ ಮೊಬೈಲ್ ಕಂಪನಿಗಳಿಗೆ ಹೊಡೆತ ನೀಡಿದೆ. ಹಲವಾರು ಕಾರು ತಯಾರಕರು ಉತ್ಪಾದನೆಯ ಕೊರತೆ ಮತ್ತು ದೀರ್ಘಾವಧಿಯ ಕಾಯುವಿಕೆಯಿಂದ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದ್ದಾರೆ.
ಹುಂಡೈ ಕಳೆದ ತಿಂಗಳು ಶೇಕಡಾ 24.2ರಷ್ಟು ಮಾರಾಟ ಕುಸಿತ ಕಂಡಿರುವುದಾಗಿ ವರದಿ ಮಾಡಿದೆ. ನವೆಂಬರ್ 2020 ರಲ್ಲಿ 48,800 ಯುನಿಟ್‌ಗಳಿಗೆ ಹೋಲಿಸಿದರೆ ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ, ಕಳೆದ ತಿಂಗಳು ಭಾರತದಲ್ಲಿ 37,001 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ.
ಎಂಜಿ ಮೋಟಾರ್ ಇಂಡಿಯಾ ಕೂಡ ಕಳೆದ ತಿಂಗಳು ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಕಂಪನಿಯು ಕಳೆದ ತಿಂಗಳು ದೇಶದಲ್ಲಿ 4,163 ಯುನಿಟ್ ಬದಲು ಕೇವಲ 2,481 ಯುನಿಟ್ ಮಾರಾಟ ಮಾಡಿದೆ.
ಇದ್ರ ಮಧ್ಯೆಯೂ ಕೆಲ ಕಂಪನಿಗಳು ಕಳೆದ ತಿಂಗಳು ಭಾರತದಲ್ಲಿ ಗಮನಾರ್ಹ ದಾಖಲೆ ಮಾಡಿವೆ. ಟೊಯೋಟಾ ಕಳೆದ ತಿಂಗಳು ಮಾರಾಟದಲ್ಲಿ ಶೇಕಡಾ 53 ರಷ್ಟು ಹೆಚ್ಚಳ ಕಂಡಿದೆ. ನವೆಂಬರ್ 2020 ರಲ್ಲಿ 8,508 ಯುನಿಟ್‌ಗಳಿಗೆ ಹೋಲಿಸಿದರೆ ಈ ಬಾರಿ 13,003 ಯುನಿಟ್ ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಕಳೆದ ತಿಂಗಳು ಭಾರತದಲ್ಲಿ ಶೇಕಡಾ 38 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ತಿಂಗಳು ಟಾಟಾ ಮೋಟರ್ಸ್ ನ 28,027 ಯೂನಿಟ್ ಮಾರಾಟವಾಗಿದೆ. 2020ರ ನವೆಂಬರ್ ನಲ್ಲಿ 21,228 ಯುನಿಟ್ ಮಾರಾಟವಾಗಿತ್ತು. ನವೆಂಬರ್ ನಲ್ಲಿ ಹೆಚ್ಚು ಮಾರಾಟವಾದ ಇನ್ನೊಂದು ಕಾರಿನ ಕಂಪನಿ ನಿಸ್ಸಾನ್. ಜಪಾನಿನ ಬ್ರ್ಯಾಂಡ್ ಕಳೆದ ತಿಂಗಳು ಭಾರತದಲ್ಲಿ 2,651 ಯುನಿಟ್ ಮಾರಾಟ ಮಾಡಿದೆ.