ರೈಲ್ವೇ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರು ರೈಲ್ವೇ ಹಳಿಯ ಮೇಲೆ ಬೀಳುವುದರಿಂದ ತಪ್ಪಿಸಿದ ಘಟನೆಯೊಂದು ಮುಂಬೈ ಬಳಿಯ ಕಲ್ಯಾಣ್ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.
ಕೇಂದ್ರ ರೈಲ್ವೇ ಈ ಕುರಿತು ಟ್ವೀಟ್ ಮಾಡಿದ್ದು, “ರೈಲು ಸಂಖ್ಯೆ 22159 ಸಿಎಸ್‌ಎಂಟಿ-ಚೆನ್ನೈ ಮೇಲ್ ಎಕ್ಸ್‌ಪ್ರೆಸ್‌ನಿಂದ ಪ್ಲಾಟ್‌ಫಾರಂ ಮೇಲೆ ಬಿದ್ದ ಮಹಿಳೆಯೊಬ್ಬರನ್ನು ಆರ್‌ಪಿಎಫ್ ಸಿಬ್ಬಂದಿ, ಉಪ್ದೇಶ್ ಯಾದವ್ ಅವರು ರಕ್ಷಿಸಿದ್ದಾರೆ. ಚಲಿಸುತ್ತಿರುವ ರೈಲಿನಿಂದ ಇಳಿಯುವ ಅಥವಾ ಹತ್ತುವ ಪ್ರಯತ್ನ ಮಾಡಬೇಡಿ ಎಂದು ರೈಲ್ವೇ ಮನವಿ ಮಾಡುತ್ತದೆ,” ಎಂದು ತಿಳಿಸಿದೆ.
ಕೇಂದ್ರ ರೈಲ್ವೇಯ ಜಿಎಂ ಅವರು ಯಾದವ್‌ರ ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಇದಾದ ಬಳಿಕ ಇನ್ನುಳಿದ ಪ್ರಯಾಣಿಕರನ್ನು ಚಲಿಸುತ್ತಿರುವ ರೈಲಿನಿಂದ ಇಳಿಯದಂತೆ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ, ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಿಳಿಸಿದ್ದಾರೆ.
“ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಕನಿಷ್ಠ ಒಂದೂವರೆ ಅಡಿ ಅಂತರವಿದೆ. ಇದನ್ನು ಸರಿಪಡಿಸುವುದು ಬಿಟ್ಟು, ಇಂಥ ವಿಡಿಯೋಗಳನ್ನು ಪೋಸ್ಟ್ ಮಾಡಲು ನಿಮಗೆ ನಾಚಿಕೆ ಇಲ್ಲವೇ,” ಎಂದು ಚೇತನ್ ನಾಪ್ಡೇ ಹೆಸರಿನ ನೆಟ್ಟಿಗರೊಬ್ಬರು ಖಾರವಾಗಿ ಟ್ವೀಟ ಮಾಡಿದ್ದಾರೆ.