ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಜನರಿಗೆ ಹೆಚ್ಚುವರಿ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡುವ ಕುರಿತು ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀತಿಯನ್ನು ರಚಿಸಲಾಗುತ್ತೆ ಎಂದು ದೇಶದ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಮಾಹಿತಿ ನೀಡಿದ್ದಾರೆ.
ದೇಶದಲ್ಲಿರುವ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ರಾಷ್ಟ್ರೀಯ ತಾಂತ್ರಿಕಾ ಸಲಹಾ ಗುಂಪು ಮತ್ತೊಂದು ನೀತಿಯನ್ನು ರೂಪಿಸುತ್ತದೆ. ಕಾಯಿಲೆಗಳನ್ನು ಹೊಂದಿರುವ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ವೇಳೆ ಆದ್ಯತೆ ನೀಡಲಾಗುತ್ತದೆ ಎಂದು ಅರೋರಾ ಹೇಳಿದ್ದಾರೆ.
ಬೂಸ್ಟರ್ ಡೋಸ್ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ವೃದ್ಧರಿಗೆ ಬೂಸ್ಟರ್ ಡೋಸ್ಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ನ್ನು ದೃಷ್ಟಿಯಲ್ಲಿರಿಸಿ ಈ ಬೂಸ್ಟರ್ ಡೋಸ್ ಬಗ್ಗೆ ಚಿಂತಿಸಬೇಕಿದೆ. ಬೂಸ್ಟರ್ ಡೋಸ್ ಅಂದರೆ ನಾವು 94 ಕೋಟಿ ಡೋಸ್ಗಳನ್ನು ಉತ್ಪಾದಿಸಬೇಕು. ಇದು ಒಂದೇ ರಾತ್ರಿಯಲ್ಲಿ ಆಗುವ ಕೆಲಸವಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ದೇಶದಲ್ಲಿ ಕೊರೊನಾ ಲಸಿಕೆಗೆ ಯಾವುದೇ ಕೊರತೆ ಇಲ್ಲ ಅಂತಲೂ ಹೇಳಿದ್ರು. ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ ಇಷ್ಟು ಸಮಯ ಕಳೆದರೂ ಸಹ ದೇಶದಲ್ಲಿ ಇನ್ನೂ 12 ರಿಂದ 15 ಕೋಟಿ ಜನರು ಒಂದೇ ಒಂದು ಡೋಸ್ ಲಸಿಕೆಯನ್ನು ಪಡೆದಿಲ್ಲ. 30 ಕೋಟಿ ಭಾರತೀಯರು 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಆದರೆ ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.