ಸಶಸ್ತ್ರ ಪಡೆಗಳಲ್ಲಿ ನೇಮಕಾತಿ/ಬಡ್ತಿ ವಿಚಾರದಲ್ಲಿ ಲಿಂಗಬೇಧಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶಾನುಸಾರ ಹೆಜ್ಜೆಯೊಂದನ್ನು ಇಟ್ಟಿರುವ ಭಾರತೀಯ ಸೇನೆ 557 ಮಹಿಳೆಯರಿಗೆ ಶಾಶ್ವತ ಕಮಿಷನ್ (ಪಿಸಿ) ಸ್ಥಾನಮಾನ ಕೊಟ್ಟಿದೆ.
“ಮಹಿಳಾ ಅಧಿಕಾರಿಗಳಿಗೆ ಪಿಸಿ ನೀಡುವ ವಿಚಾರದಲ್ಲಿ ಯಾವುದೇ ವಿಳಂಬ ಮಾಡಿಲ್ಲ,” ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಪಿಸಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 72 ಮಹಿಳೆಯರ ವಿಷಯದ ಉಲ್ಲೇಖ ಮಾಡಿದ ವೇಳೆ ಪತ್ರಿಕ್ರಿಯಿಸಿದ ಅಜಯ್ ಭಟ್, “ಈ ವರ್ಷದ ನವೆಂಬರ್ 25ರಂದು ಅರ್ಹರಾದ 63 ಮಹಿಳೆಯರಿಗೆ ಪಿಸಿ ನೀಡಲಾಗಿದೆ,” ಎಂದಿದ್ದಾರೆ.
ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಕಮಿಷನ್ ಮಾಡಲು (ತಾತ್ಕಾಲಿಕ ಸೇವಾ ಕಮಿಷನ್ (ಎಸ್ಎಸ್ಸಿ) ಅಲ್ಲಿ ಗರಿಷ್ಠ 14 ವರ್ಷ ಮಾತ್ರ ಸೇವೆ ಸಲ್ಲಿಸಬಹುದಾದವರಿಗೆ) ಸೇನೆಯ ಇನ್ನೂ ಎಂಟು ಅಂಗಗಳಲ್ಲಿ ನಿರ್ಣಯಕ್ಕೆ ಬರಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಬೆಚ್ಚಿಬೀಳಿಸುತ್ತೆ ಕಾಯಿಲೆ ಗುಣಪಡಿಸಲು ಈ ಚೈನೀಸ್ ಥೆರಪಿ ಅಳವಡಿಸುವ ವಿಧಾನ…!
ಅದಾಗಲೇ ಈ ಮಾನದಂಡ ಚಾಲ್ತಿಯಲ್ಲಿರುವ ಸೇನೆಯ ನ್ಯಾಯಾಂಗ, ಶಿಕ್ಷಣ ಅಂಗಗಳಲ್ಲದೇ; ಸೇನಾ ವಾಯು ರಕ್ಷಣೆ (ಎಎಡಿ), ಸಿಗ್ನಲ್ಗಳು, ಇಂಜಿನಿಯರ್ಗಳು, ಸೇನಾ ವಿಮಾನಯಾನ, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಗಳು (ಇಎಂಇ), ಸೇನಾ ಸೇವಾ ಸಿಬ್ಬಂದಿ (ಎಎಸ್ಸಿ), ಸೇನಾ ಆರ್ಡಿನೆನ್ಸ್ ಕೋರ್ (ಎಓಸಿ) ಹಾಗೂ ಗುಪ್ತಚರ ಕೋರ್ಗಳ ಅಂಗಗಳಿಗೆ ಮಹಿಳೆಯರ ಶಾಶ್ವತ ನೇಮಕಾತಿ ಮಾಡಲು ಸುಪ್ರೀಂ ಕೋರ್ಟ್ ಸೇನೆಗೆ ಆದೇಶ ನೀಡಿದೆ.
13 ಲಕ್ಷದಷ್ಟು ಸಿಬ್ಬಂದಿ ಬಲವಿರುವ ಭಾರತೀಯ ಸೇನೆಯಲ್ಲಿರುವ 43,000 ಅಧಿಕಾರಿಗಳ ಪೈಕಿ ಮಹಿಳಾ ಅಧಿಕಾರಿಗಳು ಕೇವಲ 1,650 ಮಂದಿ ಮಾತ್ರವೇ ಇದ್ದಾರೆ.