ಡಿಜಿಟಲ್ ಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರ್ಬಿಐ ಸರ್ಕಾರಕ್ಕೆ ಮಹತ್ವದ ಪ್ರಸ್ತಾಪ ನೀಡಿದೆ. ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್ ನೋಟಿನ ವ್ಯಾಖ್ಯಾನದಲ್ಲಿ ಇಡಬೇಕೆಂದು ಆರ್ಬಿಐ ಹೇಳಿದೆ.
ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್ ನೋಟಿನ ರೀತಿಯಲ್ಲಿ ನೋಡಬೇಕೆಂದು ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದ್ದು, ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲು ಆರ್ಬಿಐ ಮುಂದಾಗಿದೆ.
ಸೋಮವಾರದಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಸರ್ಕಾರ ಅಧಿವೇಶನದಲ್ಲಿ ಈ ಮಾಹಿತಿ ನೀಡಿದೆ. ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡಿದ್ದು, ಇದರಲ್ಲಿ ಸಚಿವಾಲಯವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಪರಿಚಯದಿಂದ ಆಗುವ ಹಲವಾರು ಪ್ರಯೋಜನಗಳನ್ನು ಹೇಳಿದೆ.
ಸಿಬಿಡಿಸಿ, ಜನರ ನಗದು ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ವಹಿವಾಟು ವೆಚ್ಚಗಳು ಹೆಚ್ಚಾಗುತ್ತವೆ ಎಂದು ಸಚಿವಾಲಯ ಹೇಳಿದೆ. ಇದ್ರ ಜೊತೆಯಲ್ಲೇ ಸಚಿವಾಲಯ, ಇದಕ್ಕೆ ಸಂಬಂಧಿಸಿದ ಕೆಲವು ಅಪಾಯಗಳ ಬಗ್ಗೆಯೂ ಉಲ್ಲೇಖ ಮಾಡಿದೆ. ಇದೇ ವೇಳೆ ಇನ್ನೊಂದು ಉತ್ತರದಲ್ಲಿ ಹಣಕಾಸು ಸಚಿವಾಲಯ, ದೇಶದಲ್ಲಿ ಬಿಟ್ಕಾಯಿನ್ಗೆ ಕರೆನ್ಸಿ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪವಿಲ್ಲ ಎಂದಿದೆ.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಬಿಐ, ಹಣಕಾಸು ಸಚಿವಾಲಯ ಮತ್ತು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋಕರೆನ್ಸಿಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದರು. ಕ್ರಿಪ್ಟೋಕರೆನ್ಸಿಗಳ ಬಗ್ಗೆ ಆರ್ಬಿಐ ಸತತವಾಗಿ ಕಳವಳ ವ್ಯಕ್ತಪಡಿಸುತ್ತಿದೆ. ಕ್ರಿಪ್ಟೋಕರೆನ್ಸಿಗಳ ನಿಯಂತ್ರಣದ ಸಂದಿಗ್ಧತೆಯಿಂದಾಗಿ ಕ್ರಿಪ್ಟೋ ಮಾರುಕಟ್ಟೆಯು ನಿರಂತರವಾಗಿ ಬದಲಾಗ್ತಿದೆ.