ವಿಶ್ವದಾದ್ಯಂತ ಒಮಿಕ್ರಾನ್ ರೂಪಾಂತರ ಆತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ ರೂಪಾಂತರವನ್ನು ಹೇಗೆ ಪತ್ತೆ ಮಾಡಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡ್ತಿದೆ. ಒಮಿಕ್ರಾನ್ ರೂಪಾಂತರವನ್ನು ಪಿಸಿಆರ್ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು. ವಿಶ್ವ ಆರೋಗ್ಯ ಸಂಸ್ಥೆ, ಭಾನುವಾರ ಈ ಮಾಹಿತಿ ನೀಡಿದೆ.
ಒಮಿಕ್ರಾನ್ ರೂಪಾಂತರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಈ ಹೊಸ ರೂಪಾಂತರ ಪ್ರಪಂಚದಾದ್ಯಂತ ಚಿಂತೆ ಹೆಚ್ಚಿಸಿದೆ. ಬ್ರಿಟನ್, ಜರ್ಮನಿ ಸೇರಿದಂತೆ ವಿಶ್ವದ ಹಲವು ದೇಶಗಳು ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಲೆಸೊಥೊ ಮತ್ತು ಇತರ ದೇಶಗಳ ಮೇಲೆ ನಿರ್ಬಂಧ ಹೇರಿವೆ.
ಈಗಾಗಲೇ ಅನೇಕ ರೂಪಾಂತರ ಪತ್ತೆಗೆ ನೆರವಾಗಿರುವ ಪಿಸಿಆರ್ ಪರೀಕ್ಷೆಯು ಒಮಿಕ್ರಾನ್ ಪತ್ತೆಗೂ ನೆರವಾಗಲಿದೆ. ಆದ್ರೆ ಎಂಟಿಜನ್ ಡಿಟೆಕ್ಷನ್ ಟೆಸ್ಟ್ ಸೇರಿದಂತೆ ಇತರ ರೀತಿಯ ಪರೀಕ್ಷೆಗಳಲ್ಲಿ ಇದು ಪತ್ತೆಯಾಗಲಿದೆಯಾ ಎನ್ನುವ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆಯಾಗಿದೆ. ಒಮಿಕ್ರಾನ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಎಷ್ಟು ವೇಗದಲ್ಲಿ ಹರಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೆ ಸೋಂಕಿಗೊಳಗಾದ ವ್ಯಕ್ತಿಗೆ ಇದ್ರಿಂದ ಎಷ್ಟು ಹಾನಿಯಾಗಲಿದೆ ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ.
ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದ ಜನರು ಒಮಿಕ್ರಾನ್ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಪ್ರಾಥಮಿಕ ಪುರಾವೆಗಳು ಹೇಳಿವೆ. ಆದ್ರೆ ಇದ್ರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ.