ಮಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ಕುಟುಂಬದವರನ್ನು ವಂಚಿಸಿ ವಿಮೆ ಹಣ ದೋಚಿದ ವಕೀಲನ ವಿರುದ್ಧ ಬಂದರು ಠಾಣೆಗೆ ದೂರು ನೀಡಲಾಗಿದೆ.
ಮಂಗಳೂರಿನ ಬಜಪೆಯ ಯುವಕ ಶರಣ್ 2019ರಲ್ಲಿ ಬೆಂಗಳೂರಿನಲ್ಲಿ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುವಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಸಂಬಂಧಿ ವಕೀಲರನ್ನು ನೇಮಿಸಿ ವಿಮೆ ಹಣ ಪಡೆಯಲು ಮುಂದಾಗಿದ್ದರು. ಪುತ್ರನ ಕಳೆದುಕೊಂಡ ದುಃಖದಲ್ಲಿದ್ದ ಶರಣ್ ಪೋಷಕರು ಸಂಬಂಧಿಯಾಗಿದ್ದ ವಕೀಲನನ್ನು ನೇಮಿಸಿದ್ದು, ಆತ ಹಲವಾರು ದಾಖಲೆಗಳ ಅವಶ್ಯಕತೆ ಇದೆಯೆಂದು ಆಧಾರ್ ಕಾರ್ಡ್, ಫೋಟೋ, ಪಾನ್ ಕಾರ್ಡ್ ಪಡೆದುಕೊಂಡು ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆ. ಮೃತ ಶರಣ್ ಅವರ ತಾಯಿ ಶಕುಂತಲಾ ಅವರಿಗೆ ಗೊತ್ತಾಗದಂತೆ ಅಂಚೆ ಕಚೇರಿಯಲ್ಲಿ ಎಸ್.ಬಿ. ಖಾತೆ ತೆರೆದಿದ್ದು, ವಿಮೆ ಕಂಪನಿ ನೀಡಿದ 15 ಲಕ್ಷ ರೂಪಾಯಿ ಖಾತೆಗೆ ಸಂದಾಯವಾಗಿದೆ.
ಕೋರ್ಟ್ ನಲ್ಲಿ ಚೆಕ್ ಪಡೆಯುವಾಗ ಚೆಕ್ ನಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಆಗಿದೆ ಎಂದು ಹೇಳಿದ್ದ ವಕೀಲ ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. 2021ರ ಸೆಪ್ಟೆಂಬರ್ 15 ರಂದು ಶಕುಂತಲಾ ಅವರ ಮೊಬೈಲ್ ಗೆ ನಿಮ್ಮ ಖಾತೆಗೆ 15 ಲಕ್ಷ ರೂ. ಜಮಾ ಆಗಿದೆ ಎಂಬ ಪೋಸ್ಟ್ ಆಫೀಸ್ ಬ್ಯಾಂಕ್ ಸಂದೇಶ ಬಂದಿದೆ. ಆದರೆ, ಅವರು ಪೋಸ್ಟ್ ಆಫೀಸ್ ನಲ್ಲಿ ಯಾವುದೇ ಖಾತೆ ತೆರೆದಿಲ್ಲವಾದ್ದರಿಂದ ಇದು ನಕಲಿ ಮೆಸೇಜ್ ಎಂದು ಸುಮ್ಮನಾಗಿದ್ದಾರೆ.
ನಂತರದಲ್ಲಿ 5 ಲಕ್ಷ ಮತ್ತು 10 ಲಕ್ಷ ರೂಪಾಯಿಯ ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಕೂಡ ಬಂದಿದ್ದು, ಶಕುಂತಲಾ ಅವರು ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ಅವರ ಹೆಸರಿನಲ್ಲಿ ಖಾತೆ ಇರುವ ಬಗ್ಗೆ ಗೊತ್ತಾಗಿದೆ. ಅಲ್ಲದೆ 15 ಲಕ್ಷ ರೂಪಾಯಿಗಳನ್ನು ವಕೀಲ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದು ಕೂಡ ಗೊತ್ತಾಗಿ ದೂರು ನೀಡಲಾಗಿದೆ. ವಕೀಲ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ.