ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ ಸೇರಿದಂತೆ ಗಡಿ ಭಾಗದಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದ್ದು, ತಪಾಸಣೆ ಕಡ್ಡಾಯಗೊಳಿಸಲಾಗಿದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಬೆಳಗಾವಿ ಗಡಿಯಲ್ಲಿ 23 ಚೆಕ್ ಪೋಸ್ಟ್ ಗಳಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, 2 ಡೋಸ್ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆಯೂ ಕಡ್ಡಾಯ ಪರಿಶೀಲನೆ ನಡೆಸಲಾಗುತ್ತಿದೆ. ಈ ನಡುವೆ ಕೊಗನಳ್ಳಿ ಚೆಕ್ ಪೋಸ್ಟ್ ನಲ್ಲಿ ವೈದ್ಯರು ಹಾಗೂ ಪೊಲೀಸರ ನಡುವೆಯೇ ಜಟಾಪಟಿ ನಡೆದ ಪ್ರಸಂಗ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ವೈದ್ಯರೊಬ್ಬರನ್ನು ಕೊಗಿನಳ್ಳಿ ಚೆಕ್ ಪೋಸ್ಟ್ ಬಳಿ ತಡೆದು ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗೆ ಮುಂದಾದಾಗ ವೈದ್ಯರು, ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಸ್ವತಃ ತಾನೇ ವೈದ್ಯನಾಗಿದ್ದು, ತನಗೆ ತಪಾಸಣೆ ನಡೆಸುವುದನ್ನು ಡಾಕ್ಟರ್ ವಿರೋಧಿಸಿದ್ದಾರೆ. ಇದೇ ವಿಚಾರವಾಗಿ ಪೊಲೀಸರು ಹಾಗೂ ವೈದ್ಯರ ನಡುವೆ ಚೆಕ್ ಪೋಸ್ಟ್ ನಲ್ಲಿಯೇ ಜಟಾಪಟಿ ಆರಂಭವಾಗಿದೆ. ಅಲ್ಲದೇ ಕೊಗನಳ್ಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಕಾಟಾಚಾರದ ತಪಾಸಣೆ ನಡೆಸಿದ್ದಾಗಿ ಆರೋಪಿಸಿದ್ದಾರೆ.
ಪೊಲೀಸರು ಹಾಗೂ ವೈದ್ಯರ ನಡುವಿನ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.