ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಾಗ್ದಾಳಿ ನಡೆಸಿದ್ದಾರೆ. ಪರೋಕ್ಷವಾಗಿ ರಮೇಶ್ ಒಬ್ಬ ಬಂಡುಕೋರ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರು ನಮ್ಮ ಜೊತೆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರು ಬಂಡುಕೋರಿ ಮಾಡುತ್ತಿದ್ದರು. ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಕೂಡ ಬಂಡುಕೋರತನ ಮಾಡುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ನೋಡಿಕೊಳ್ಳುತ್ತಾರೆ. ನಾನು ಉತ್ತರಿಸುವುದಿಲ್ಲ ಎಂದು ಹಂದಿಗುಂದ ಗ್ರಾಮದಲ್ಲಿ ಪರೋಕ್ಷವಾಗಿ ರಮೇಶ್ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ ವಾಗ್ದಾಳಿ ನಡೆಸಿದ್ದಾರೆ.