ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕ್ರಿಕೆಟ್ ಪಂದ್ಯದ ವೇಳೆ ಗುಟ್ಕಾ ಜಗಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದೀಗ ಆ ವ್ಯಕ್ತಿ ತಾನು ತಂಬಾಕು ಜಗಿಯುತ್ತಿರಲಿಲ್ಲ, ವೀಳ್ಯದೆಲೆ ಅಗಿಯುತ್ತಿದ್ದೆ. ಇನ್ಮುಂದೆ ಅದನ್ನೂ ತ್ಯಜಿಸುವುದಾಗಿ ಹೇಳಿದ್ದಾನೆ.
ಗುರುವಾರ (ನವೆಂಬರ್ 25)ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸುತ್ತಿದ್ದ ಕಾನ್ಪುರದ ವ್ಯಕ್ತಿ ತಂಬಾಕು ಜಗಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿ ತನ್ನ ಬಾಯಿಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್ನಲ್ಲಿ ಮಾತನಾಡುತ್ತಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಪಂದ್ಯದ 70 ಓವರ್ಗಳು ಮುಗಿದ ಬಳಿಕ ಈ ಹಾಸ್ಯಾಸ್ಪದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದು ಇಂಟರ್ನೆಟ್ ನಲ್ಲಿ ಮೀಮ್ಸ್ ಗಳ ಪ್ರವಾಹ ಹರಿಯಲು ಕಾರಣವಾಯಿತು. ವೈರಲ್ ವಿಡಿಯೋದ ಮೀಮ್ಸ್ ಅನ್ನು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ರೀಟ್ವೀಟ್ ಮಾಡಿದ್ದರು.
ಇದೀಗ ಈ ವ್ಯಕ್ತಿಯನ್ನು ಶೋಭಿತ್ ಪಾಂಡೆ ಎಂದು ಗುರುತಿಸಲಾಗಿದೆ. ವೈರಲ್ ಮೀಮ್ ಮತ್ತು ವಿಡಿಯೋದಲ್ಲಿರುವ ಆ ವ್ಯಕ್ತಿ ತಾನೇ ಎಂಬುದನ್ನು ದೃಢಪಡಿಸಿದ್ದಾನೆ. ಪಾಂಡೆ ತನ್ನ ಸಹೋದರಿಯೊಂದಿಗೆ ಪಂದ್ಯವನ್ನು ವೀಕ್ಷಿಸಲು ಹೋಗಿದ್ದು, ತಾನು ತಂಬಾಕು ಜಗಿಯುತ್ತಿರಲಿಲ್ಲ, ಆದರೆ ವೀಳ್ಯದೆಲೆ ಜಗಿಯುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದಾರೆ.
ಆದರೆ, ತನ್ನ ಸಹೋದರಿ ಬಗ್ಗೆ ಪೋಸ್ಟ್ ಮಾಡಿದ ಅಶ್ಲೀಲ ಕಾಮೆಂಟ್ಗಳಿಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ಮಾಡುವ ಮುನ್ನ, ಆಕೆ ಯಾರೊಬ್ಬರ ಮಗಳು ಮತ್ತು ಸಹೋದರಿ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.