ಮೈಸೂರು: ಗುತ್ತಿಗೆದಾರರಿಂದ ಮಂತ್ರಿಗಳು ಸೇರಿದಂತೆ ಇಲಾಖಾ ಉನ್ನತಾಧಿಕಾರಿಗಳಿಗೆ ಇಷ್ಟಿಷ್ಟು ಪರ್ಸಂಟೇಜ್ ಸಂದಾಯವಾಗುತ್ತಿದೆ ಎಂದು ಖುದ್ದು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಸಿಎಂ ಬೊಮ್ಮಾಯಿ ಕಾರ್ಯದರ್ಶಿ ಮಟ್ಟದಲ್ಲಿ ಆದೇಶ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುತ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋದಾ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪರ್ಸಂಟೇಜ್ ಸಂದಾಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ಲಂಚ ತೆಗೆದುಕೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ಮಾಡಿಸ್ತೀವಿ ಎಂದರೆ ಏನು ? ಇದು ಕಣ್ಣೊರೆಸುವ ತಂತ್ರವಲ್ಲದೇ ಬೇರಿನ್ನೇನು ಎಂದು ಪ್ರಶ್ನಿಸಿದ್ದಾರೆ.
ಬಿಡಿಎಯಲ್ಲಿ 300 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಅಂತಾರೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ದೂರು ನೀಡಿದರೆ ಕಾಂಗ್ರೆಸ್ ಅವಧಿಯಲ್ಲಿಯೂ ಭ್ರಷ್ಟಾಚಾರ ಇತ್ತು ಎನ್ನುತ್ತಾರೆ. ಹಿಂದೆಯೂ ಭ್ರಷ್ಟಾಚಾರ ನಡೆದಿತ್ತು ಎಂದಾದರೆ ತನಿಖೆ ನಡೆಸಿ. ಉಪ್ಪು ತಿಂದವರು ನೀರು ಕುಡಿಯಲಿ. ನಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿದ್ದರೆ ಅದನ್ನೂ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
35-40 ಪರ್ಸಂಟ್ ಸರ್ಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸಂಟೇಜ್ ತೆಗೆದುಕೊಳ್ಳುತ್ತಾರೆ. ಇದನ್ನು ಸ್ವತಃ ಕೆಂಪಣ್ಣ ಅವರೇ ನೀಡಿರುವ ಹೇಳಿಕೆ. ಇದನ್ನೇ ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರ್ಕಾರವನ್ನು ವಿಸರ್ಜನೆ ಮಾಡಲಿ ಎಂದು ಗುಡುಗಿದರು.