ಬೆಂಗಳೂರು: ಕೊರೊನಾ ರಕ್ಕಸ ಹೊಸ ಅವತಾರ ಪತ್ತೆಯಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. B.1.1.529 ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಇದಕ್ಕೆ ಒಮಿಕ್ರೋನ್ ಎಂದು ಹೆಸರಿಡಲಾಗಿದೆ. ಹೊಸ ರೂಪಾಂತರ ವೈರಸ್ ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಒಮಿಕ್ರೊನ್ ವೈರಸ್ ಹರಡುವ ಪ್ರಮಾಣ ಹೆಚ್ಚಾಗಿದೆ. ಆದರೆ ರೋಗ ಲಕ್ಷಣಗಳು ಮೊದಲಿನಂತಯೇ ಇದೆ. ಡೆಲ್ಟಾಗಿಂತ ಗಂಭೀರ ಇದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದರು.
ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆಗೆ ವಿಮಾನ ನಿಲ್ದಾಣಗಳಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ಗೈಡ್ ಲೈನ್ ಕೂಡ ನೀಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಲಾಗಿದೆ. ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುವುದು. ಒಂದು ವಾರದ ಬಳಿಕ ಮತ್ತೊಮ್ಮೆ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದರು.
ಹೊಸ ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇನ್ನು 45 ಲಕ್ಷ ಜನ ಇನ್ನೂ ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಅವಧಿ ಮುಗಿದಿದ್ದರೂ ಉದಾಸೀನ ಮಾಡಿದ್ದಾರೆ. ಹೀಗೆ ನಿರ್ಲಕ್ಷ ಮಾಡುವುದು ಸರಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇಲ್ಲ. ಸೋಮವಾರದಿಂದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.