
ಬೆಂಗಳೂರು: ರೂಪಾಂತರಿ ಕೊರೋನಾ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಗ್ಗೆ ಮಾಹಿತಿ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಾಲ್ಕು ದೇಶಗಳಲ್ಲಿ ರೂಪಾಂತರಿ ‘ಒಮಿಕ್ರೋನ್’ ಪತ್ತೆಯಾಗಿದೆ. ವಿಶ್ವಸಂಸ್ಥೆಯಿಂದ ತೀವ್ರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ಅಗತ್ಯವಿದೆ. ವಿದೇಶದಿಂದ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿ ಪ್ರಕಟಿಸಲಾಗಿದೆ. ಏರ್ಪೋರ್ಟ್ ಗಳಲ್ಲಿ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ಬಂದರೂ ಕೂಡ ಒಂದು ವಾರ ಹೋಂ ಕ್ವಾರಂಟೈನ್ ನಲ್ಲಿರಬೇಕಿದೆ. ವಾರದ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
45 ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿಲ್ಲ. ದಯಮಾಡಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹೊಸ ತಳಿ ವೈರಸ್ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ ಲಕ್ಷಣಗಳು ಮೊದಲಿನಂತೆಯೇ ಇದೆ, ಡೆಲ್ಟಾಗಿಂತ ಇದು ಗಂಭೀರವಾಗಿದೆ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸಿದೆ. 45 ಲಕ್ಷ ಜನ ಎರಡನೇ ಡೋಸ್ ಪಡೆದಿಲ್ಲ. ಆತಂಕ ಸೃಷ್ಟಿ ಮಾಡುವುದು ಬೇಡ, ಅವಧಿ ಮುಗಿದರೂ ಕೆಲವರು ಲಸಿಕೆ ಪಡೆದಿಲ್ಲ. ಉದಾಸೀನ ತೋರದೆ ಲಸಿಕೆ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇಲ್ಲ. ಸೋಮವಾರದಿಂದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲಾ ಔಷಧಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸೋಮವಾರದಿಂದ ಔಷಧಕ್ಕಾಗಿ ಚೀಟಿ ಬರೆದು ಕೊಡುವುದಿಲ್ಲ. ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದು ಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.