ಸಿಯೋನಿ: ಸಫಾರಿ ಮಾಡುವುದು ಥ್ರಿಲ್ ಕೊಡಬಹುದು. ಆದರೆ, ಕಾಡುಪ್ರಾಣಿಗಳಿರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾದದ್ದು ಕೂಡ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ. ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೀಪ್ ನಲ್ಲಿ ತೆರಳಿದ್ದ ಪ್ರವಾಸಿಗರಿಗೆ ಜೀವ ಬಾಯಿಗೆ ಬಂದ ಹಾಗಿದೆ.
ತೆರೆದ ಜೀಪ್ ನಲ್ಲಿ ಸಫಾರಿ ಹೊರಟಿದ್ದ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿ ಬಂತು ಹುಲಿ ಅಂತಾ ಇವರೆಲ್ಲಾ ಫೋಟೋ ತೆಗೆದಿದ್ದೇ ತೆಗೆದಿದ್ದು. ಆದರೆ, ದೂರದಲ್ಲಿದ್ದ ಹುಲಿ ಜೀಪ್ ಸಮೀಪಕ್ಕೆ ಬಂದಾಗ ಕ್ಷಣಕಾಲ ಪ್ರವಾಸಿಗರು ಭೀತಿಗೊಂಡಿದ್ದಾರೆ. ಹುಲಿಯ ದಾರಿಯನ್ನು ತಡೆದಿದ್ದೇ ಇವರಿಗೆ ಅಪಾಯವಾಗಿ ಪರಿಣಮಿಸಿದೆ. ಗೈಡ್ ಮತ್ತು ಜೀಪ್ ಚಾಲಕನ ಅಜಾಗರೂಕ ವರ್ತನೆಯು ಪ್ರವಾಸಿಗರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ ಎಂದು ಆರೋಪಿಸಲಾಗಿದೆ.
ಒಂದು ಹಂತದಲ್ಲಿ, ಜೀಪ್ ನಲ್ಲಿದ್ದ ಪ್ರವಾಸಿಗರಿಗೆ ಹುಲಿ ದಾಳಿ ಮಾಡಿಯೇ ಬಿಡುತ್ತದೆ ಎಂದು ಹೆದರಿಬಿಟ್ಟಿದ್ದಾರೆ. ಏಳು ವಾಹನಗಳಲ್ಲಿ ಕನಿಷ್ಠ 24 ಪ್ರವಾಸಿಗರಿದ್ದರು. ಬಳಿಕ ವಾಹನಗಳನ್ನು ದೂರಕ್ಕೆ ಸ್ಥಳಾಂತರಿಸಿದ್ದು, ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ವಿಡಿಯೋ ವೈರಲ್ ಆದ ನಂತರ 7 ಮಂದಿ ಜೀಪ್ ಚಾಲಕರು ಮತ್ತು ಪ್ರವಾಸಿ ಮಾರ್ಗದರ್ಶಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ರುಖಾದ್ ಅರಣ್ಯ ವ್ಯಾಪ್ತಿಯ ಎಸ್‌ಡಿಒ ಆಶಿಶ್ ಪಾಂಡೆ ತಿಳಿಸಿದ್ದಾರೆ.