ಬಾರ್ಮರ್: ಕೂಲಿ ಕಾರ್ಮಿಕನ ಮಗನೊಬ್ಬ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಭವಿಷ್ಯದ ವೈದ್ಯನಾಗಲು ಹೊರಟಿರುವ ಹಳ್ಳಿ ಹುಡುಗನ ಕಥೆಯಿದು.
ರಾಜಸ್ಥಾನದ ಬಾರ್ಮೆರ್ನ ಸಿಂಧಾರಿ ತಹಸಿಲ್ನ ಕಮ್ಥಾಯ್ ಗ್ರಾಮದ ನಿವಾಸಿ ದುಧರಾಂ ಅವರು 720 ಕ್ಕೆ 626 ಅಂಕಗಳನ್ನು ಗಳಿಸಿದ್ದು, ವೈದ್ಯನಾಗುವ ಕನಸನ್ನು ನನಸು ಮಾಡುವತ್ತ ತನ್ನ ಚಿತ್ತ ಹರಿಸಿದ್ದಾರೆ. ದುಧಾರಾಂ ಅವರ ಜೀವನವು ಸಾಕಷ್ಟು ಹೋರಾಟಗಳಿಂದ ತುಂಬಿದೆ.
ದುಧರಾಂ ತಂದೆ ಹಾಗೂ ಸಹೋದರ ಕೂಲಿ ಕೆಲಸ ಮಾಡಿ ಕುಟುಂಬದ ಜೀವನ ಸಾಗಿಸುತ್ತಿದ್ದಾರೆ. ಅವರ ತಾಯಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಕಿರಿಯ ಸಹೋದರ ಖೇಮಾರಾಮ್ ಕೂಲಿ ಕೆಲಸ ಮಾಡುವುದರ ಜೊತೆಗೆ ಕೋಟಾ ಓಪನ್ ಯೂನಿವರ್ಸಿಟಿಯಲ್ಲಿ ಬಿಎ ಮಾಡುತ್ತಿದ್ದು, ತಂಗಿ ಹರಿಯೋ 10 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುಟ್ಟ ಗುಡಿಸಲಿನಲ್ಲಿ ಕುಟುಂಬ ವಾಸ ಮಾಡುತ್ತದೆ.
ವೈದ್ಯನಾಗಬೇಕೆಂದು ಕನಸು ಕಂಡಿರುವ ದುಧರಾಂ ಕನಸನ್ನು ನನಸಾಗಿಸಲು ಹಗಲಿರುಳು ಅಧ್ಯಯನ ಮಾಡಿದ್ದಾನೆ. ಇಂದು ಕಮ್ತಾಯಿ ಗ್ರಾಮದಲ್ಲೇ ಮೊದಲ ಬಾರಿಗೆ ಎಂಬಿಬಿಎಸ್ ಮಾಡಿ ವೈದ್ಯನಾಗಲಿರುವ ದುಧರಾಂ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.
ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರೂ, ದುಧರಾಂ ಅವರು ತಮ್ಮ ಗುರಿಯಿಂದ ವಿಚಲಿತರಾಗಲಿಲ್ಲ. ನಾಲ್ಕನೇ ಸತತ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ 2021 ರಲ್ಲಿ 720 ರಲ್ಲಿ 626 ಅಂಕಗಳನ್ನು ಗಳಿಸುವ ಮೂಲಕ 9375 ರ ಅಖಿಲ ಭಾರತ ರ್ಯಾಂಕ್ ಗಳಿಸಿದ್ದಾರೆ.
ದುಧರಾಂ ಅವರ ಕುಟುಂಬವು ಪೋಷಕರು ಮತ್ತು ಒಡಹುಟ್ಟಿದವರು ಸೇರಿದಂತೆ ಐದು ಸದಸ್ಯರನ್ನು ಒಳಗೊಂಡಿದೆ. ಕುಟುಂಬವು 10-12 ಬಿಘಾ ಭೂಮಿಯನ್ನು ಹೊಂದಿದೆ. ಆದರೆ, ಒಣ ಪ್ರದೇಶದಲ್ಲಿರುವುದರಿಂದ ವರ್ಷದಲ್ಲಿ ಕೇವಲ ಒಂದು ರಾಗಿ ಬೆಳೆಯನ್ನು ಮಾತ್ರ ಬೆಳೆಯಬಹುದು. ಸಾಮ್ದಾರಿ ತಹಸಿಲ್ನಲ್ಲಿ ಸುಮಾರು 250 ಮನೆಗಳಿದ್ದು, ಇಲ್ಲಿ 5 ರಿಂದ 6 ಗಂಟೆ ಮಾತ್ರ ವಿದ್ಯುತ್ ಇರುತ್ತದೆ. ಗ್ರಾಮದಲ್ಲಿ ನೀರಿನ ಅಭಾವ ಎದುರಾಗಿದ್ದು, 10 ಕಿ.ಮೀ ದೂರದ ಕೊಳವೆ ಬಾವಿಯಿಂದ ಟ್ಯಾಂಕರ್ನಲ್ಲಿ ನೀರು ತಂದು ಮನೆ ಬಳಿಯೇ ಸಂಗ್ರಹಿಸಿಡಬೇಕಾದ ಪರಿಸ್ಥಿತಿಯಿದೆ.