ಶಾಲೆ ಅಂದಮೇಲೆ ಅಲ್ಲಿ ಬಳಪ, ಪೆನ್ನು, ಪೆನ್ಸಿಲ್ ವಿಚಾರಕ್ಕಾಗಿ ಜಗಳಗಳು ಆಗೋದು ಸರ್ವೇ ಸಾಮಾನ್ಯ. ಬಾಲ್ಯದ ದಿನಗಳಲ್ಲಿ ಸ್ನೇಹಿತರ ಪೆನ್ನು, ಪೆನ್ಸಿಲ್ಗಳನ್ನು ಕದ್ದು ನಾವು ಕೂಡ ಮಜ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಾಥಮಿಕ ಶಾಲೆಯ ಬಾಲಕ ಸಹಪಾಠಿಯು ಪೆನ್ಸಿಲ್ ಕದ್ದ ಬಳಿಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ..!
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೊಲೀಸರು ಬಾಲಕರ ಗುಂಪೊಂದು ಪೊಲೀಸ್ ಠಾಣೆಗೆ ಆಗಮಿಸಿ ಸಹಪಾಠಿಯ ವಿರುದ್ಧ ದೂರು ದಾಖಲಿಸುವಂತೆ ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪೆಡಕಡುಬುರು ಪೊಲೀಸ್ ಠಾಣೆಗೆ ಆಗಮಿಸಿದ ಬಾಲಕ ಪೊಲೀಸರ ಬಳಿ ತನ್ನ ಪೆನ್ಸಿಲ್ ಸಮಸ್ಯೆಯನ್ನು ಬಗೆಹರಿಸುವಂತೆ ಪೊಲೀಸರ ಬಳಿ ಹೇಳ್ತಿರೋದನ್ನು ಕೇಳಬಹುದಾಗಿದೆ.
ಆಂಧ್ರಪ್ರದೇಶ ಪೊಲೀಸ್ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಪ್ರಾಥಮಿಕ ಶಾಲೆಯ ಮಗು ಕೂಡ ಆಂಧ್ರಪ್ರದೇಶ ಪೊಲೀಸರ ಮೇಲೆ ನಂಬಿಕೆಯನ್ನಿಟ್ಟಿದೆ. ಆಂಧ್ರಪ್ರದೇಶ ಪೊಲೀಸರು ಜನರಿಗೆ ಕಾನೂನಿನ ಮೇಲೆ ವಿಶ್ವಾಸ ಹಾಗೂ ಭರವಸೆಯನ್ನು ಹುಟ್ಟಿಸುವಂತಹ ಸೇವೆಯನ್ನು ನೀಡುತ್ತಿದ್ದಾರೆ ಎಂದು ಟ್ವೀಟಾಯಿಸಿದ್ದಾರೆ.
ವಿಡಿಯೋದಲ್ಲಿ ಪುಟ್ಟ ಬಾಲಕನು, ತನ್ನ ಸಹಪಾಠಿ ಪೆನ್ಸಿಲ್ ವಾಪಸ್ ಕೊಡೋದಾಗಿ ತೆಗೆದುಕೊಂಡು ಬಳಿಕ ವಾಪಸ್ ಕೊಡಲೇ ಇಲ್ಲ ಎಂದು ಹೇಳಿದ್ದಾನೆ. ಇದಕ್ಕೆ ನಾವೇನು ಮಾಡೋಣ ಎಂದು ಪೊಲೀಸರು ಕೇಳಿದ್ದಕ್ಕೆ ಬಾಲಕ ನನ್ನ ಸಹಪಾಠಿಯ ವಿರುದ್ಧ ದೂರನ್ನು ದಾಖಲಿಸಿಕೊಳ್ಳಿ ಎಂದು ಹೇಳಿದ್ದಾನೆ. ಬಾಲಕನ ಜೊತೆ ಆತನ ಸ್ನೇಹಿತರು ಸಹ ಠಾಣೆಗೆ ಆಗಮಿಸಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋದ ಕೊನೆಯಲ್ಲಿ ಇಬ್ಬರು ಮಕ್ಕಳು ಪರಸ್ಪರ ಹಸ್ತಲಾಘವ ಮಾಡಿಕೊಂಡು ರಾಜಿ ಮಾಡಿಕೊಂಡಿದ್ದಾರೆ.