ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಇಳಿದು ಒಂದು ವರ್ಷ ಕಳೆದ ಸಂದರ್ಭವನ್ನು ಆಚರಿಸಲು ಪಂಜಾಬ್ ಹಾಗೂ ಹರಿಯಾಣಾದ ರೈತರು ಮುಂದಾಗಿದ್ದಾರೆ. ದೆಹಲಿ ಬಳಿಯ ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆ ಆಗುತ್ತಿದ್ದಾರೆ.
ಈ ಸಂದರ್ಭದಲ್ಲಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ಪ್ರಗತ್ ಸಿಂಗ್ ತಿಳಿಸಿದ್ದಾರೆ.
ಕೃಷಿ ಸುಧಾರಣಾ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿರುವುದು ಬರೀ ಔಪಚಾರಿಕ ಕ್ರಮವಷ್ಟೇ ಎಂದಿರುವ ರೈತ ನಾಯಕರು, ಇನ್ನು ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಇನ್ನಿತರ ವಿಷಯಗಳನ್ನು ಸರ್ಕಾರದಿಂದ ಬಗೆಹರಿಸಿಕೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ನಡೆಸಲಿರುವ ನವೆಂಬರ್ 27ರಂದು ದೆಹಲಿಯ ಗಡಿ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಕೃಷಿ ಕಾನೂನುಗಳ ಹಿಂಪಡೆತ ಮಸೂದೆ, 2021ಕ್ಕೆ ಪ್ರಧಾನಿ ನರೇಂದ್ರ ಮೋದಿ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ತಂದಿದ್ದ ಮೂರು ಕಾನೂನುಗಳನ್ನು ಹಿಂಪಡೆಯಲು ಘೋಷಿಸಿದ ಮೂರೇ ದಿನಗಳಲ್ಲಿ ಸಂಪುಟದ ಅನುಮೋದನೆ ಸಿಕ್ಕಿದ್ದು, ನವೆಂಬರ್ 29ರಂದು ಸಂಸತ್ತಿನಲ್ಲಿ ಲೋಕಸಭೆಯ ಅಂಗಳದಲ್ಲಿ ತರಲಾಗುವುದು.