ಬೆಂಗಳೂರು: ಶೇಕಡ 20 ರಷ್ಟು SSLC ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶೇಕಡ 100 ರಷ್ಟು ಪಠ್ಯ ಬೋಧಿಸಲು ಶಿಕ್ಷಕರಿಗೆ ಒತ್ತಡರವಾಗುತ್ತಿತ್ತು.
ಪ್ರತಿವರ್ಷ 240ಕ್ಕೂ ಹೆಚ್ಚು ಶೈಕ್ಷಣಿಕ ದಿನಗಳು ಸಿಗುತ್ತಿದ್ದವು. ಆದರೆ, ಪ್ರಸಕ್ತ ವರ್ಷ ತಡವಾಗಿ ಶಾಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 140ಕ್ಕೂ ಕಡಿಮೆ ದಿನಗಳು ಇವೆ. ಇದರಿಂದ ಬೋಧನೆಗೆ ಶಿಕ್ಷಕರಿಗೆ ಒತ್ತಡವಾಗುತ್ತಿತ್ತು. ಒತ್ತಡದಲ್ಲೇ ಬೇಗನೆ ಪಠ್ಯ ಮುಗಿಸಲು ಶಿಕ್ಷಕರು ಮುಂದಾಗಿದ್ದು, ದಿನಕ್ಕೊಂದು ಪಾಠದಂತೆ ಬೋಧನೆ ಮಾಡುತ್ತಿದ್ದರು. ವಿಜ್ಞಾನ, ಗಣಿತ ಪ್ರಾಯೋಗಿಕ ಪಾಠಗಳನ್ನು ಕಡಿತಗೊಳಿಸಲಾಗಿತ್ತು.
ಒತ್ತಡದಿಂದಾಗಿ ವಿದ್ಯಾರ್ಥಿಗಳಿಗೂ ಕೂಡ ಪಾಠ ಅರ್ಥವಾಗುತ್ತಿರಲಿಲ್ಲ. ಪಠ್ಯ ಕಡಿತಗೊಳಿಸಬೇಕು ಎಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ತೀವ್ರ ಒತ್ತಡ ಕೇಳಿಬಂದಿತ್ತು. ಹೀಗಾಗಿ ಪಠ್ಯ ಕಡಿತಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಚಿಂತನೆ ನಡೆಸಿದ್ದು, ಶಿಕ್ಷಣ ತಜ್ಞರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಚರ್ಚಿಸಿ ಪಠ್ಯ ಕಡಿತದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಸಭೆಯಲ್ಲಿ ಚರ್ಚಿಸಿ ಸಚಿವರು ಅಂತಿಮ ನಿರ್ಧಾರ ತಿಳಿಸಲಿದ್ದಾರೆ. ಪಠ್ಯ ಕಡಿತದ ಬಗ್ಗೆ ಶಿಕ್ಷಣ ಇಲಾಖೆಯಿಂದ ಇಂದೇ ಅಧಿಕೃತ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.