ಬೆಂಗಳೂರು: ಇಂದಿನಿಂದ ಮತ್ತೊಂದು ಸೈಕ್ಲೋನ್ ಅಪ್ಪಳಿಸುವ ಆತಂಕ ಮೂಡಿದೆ. ಚೆನ್ನೈಗೆ ಅಪ್ಪಳಿಸಲಿರುವ ಸೈಕ್ಲೋನ್ ರಾಜ್ಯದ ಮೇಲೆ ಪ್ರಭಾವ ಬೀರಲಿದೆ. ಮೈಸೂರು ಭಾಗ ಮತ್ತು ಉಡುಪಿ ಭಾಗದವರೆಗೂ ಸೈಕ್ಲೋನ್ ಪ್ರಭಾವದಿಂದ ಮಳೆಯಾಗುವ ಸಾಧ್ಯತೆ. ನವೆಂಬರ್ 26 ರಿಂದ 28 ರವರೆಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಜನಸಾಮಾನ್ಯರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗಲೇ ರಾಜ್ಯದಲ್ಲಿ ನವೆಂಬರ್ 28 ರಿಂದ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನವೆಂಬರ್ 28, 29 ರಂದು ಕರಾವಳಿಯ ಉಡುಪಿ, ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ನವೆಂಬರ್ 26, 27 ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.