ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಪಂಚಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ತಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಬೇಕಾಗಿ ಬಂದಿದೆ. ಅಲ್ಲದೆ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಬಗ್ಗೆ ಜಾಗೃತಗೊಳಿಸಿದೆ. ಆದರೆ, ಮಹಿಳೆಯೊಬ್ಬಳು ರೋಗಾಣು ಮುಕ್ತವಾಗಿರಲು ವಿಭಿನ್ನವಾಗಿ ಪ್ರಯತ್ನಿಸಿದ್ದಾಳೆ.
ಯುಎಸ್ ನ ಎಮ್ಮಾ ಎಂಬ ಮಹಿಳೆಯು ರೋಗಾಣುಗಳಿಂದ ದೂರವಿರಬೇಕೆಂದ್ರೆ ದಿನಸಿ ಖರೀದಿ ಮಾಡುವಾಗ ಬೇರೆ ಯಾರೂ ಸಾರ್ವಜನಿಕರು ಇರಬಾರದು ಎಂದು ನಿರ್ಧರಿಸಿದ್ದಾರೆ. ಇದಕ್ಕಾಗಿ ತಾನು ಮತ್ತು ತನ್ನ ಪತಿ ಲ್ಯೂಕಾಸ್ ಜೊತೆ ದಿನಸಿ ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್ ಅನ್ನು ಒಂದು ಗಂಟೆಗಳ ಕಾಲ ಬಾಡಿಗೆಗೆ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಟಿಕ್ ಟಾಕ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು, ರೋಗಾಣುಗಳಿಂದ ದೂರವಿರಲು ಅವರ ಕುಟುಂಬವು ವಿಮಾನದಲ್ಲಿ ಕೂಡ ಪ್ರಯಾಣಿಸುವುದಿಲ್ಲ. ಇತರರ ಮನೆಗೆ ಭೇಟಿ ನೀಡುವುದಿಲ್ಲ ಮತ್ತು ರೆಸ್ಟೋರೆಂಟ್ಗಳಿಗೆ ಕೂಡ ಹೋಗುವುದಿಲ್ಲ. ಹಾಗೂ ಅವರು ವಾರಕ್ಕೊಮ್ಮೆ ಒಂದು ಗಂಟೆಯವರೆಗೆ ಸೂಪರ್ ಮಾರ್ಕೆಟ್ ಅನ್ನು ಬಾಡಿಗೆಗೆ ಪಡೆಯುತ್ತಾರೆ. ಇದರಿಂದ ಅವರು ಇತರ ಜನರ ಹತ್ತಿರ ಹೋಗಬೇಕಾಗಿಲ್ಲ.
ಇನ್ನು ಸೂಪರ್ ಮಾರ್ಕೆಟ್ ಅನ್ನು ಬಾಡಿಗೆಗೆ ಪಡೆಯಲು ಎಷ್ಟು ವೆಚ್ಚವಾಗುತ್ತದೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ, ಅದರ ಬಗ್ಗೆ ಎಮ್ಮಾ ನಿಖರವಾದ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಅವರ ಬಳಿ ಸಾಕಷ್ಟು ಹಣ ಇದೆಯಂತೆ. ಲಾಟರಿಯಲ್ಲಿ ಇವರಿಗೆ ಭಾರಿ ಪ್ರಮಾಣದ ದುಡ್ಡು ಬಂದಿರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಿಲ್ಲ ಎಂಬುದಾಗಿ ಮಹಿಳೆ ಎಮ್ಮಾ ವಿವರಿಸಿದ್ದಾಳೆ.