ಲಕ್ನೋ: ಉತ್ತರಪ್ರದೇಶದ ಲಕ್ನೋದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳಿಂದ 22 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ನಿಮಗೆ ನೆನಪಿರಬಹುದು. ಇದಾದ ನಾಲ್ಕು ತಿಂಗಳುಗಳ ನಂತರ ಸಾದತ್ ಅಲಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿದ್ದಾರೆ.
ಯುವತಿಯಿಂದ ಸಾದತ್ ಅಲಿ ವಿನಾಕಾರಣ ಹಲ್ಲೆಗೊಳಗಾಗಿದ್ದರು ಎಂದು ಹೇಳಲಾಗಿತ್ತು. ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ವಿನಾಕಾರಣ ಚಾಲಕನಿಗೆ ಹೊಡೆದಿದ್ದಕ್ಕೆ ಯುವತಿ ವಿರುದ್ಧ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕವಾಗಿ ಥಳಿಸಿ, ಅವಮಾನಕ್ಕೊಳಗಾದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ಹಲವರು ಸಹಾನುಭೂತಿ ವ್ಯಕ್ತಪಡಿಸಿದ್ದರು. ಇದೀಗ ಅಲಿ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರು ರಚಿಸಿರುವ ಪ್ರಗತಿಶೀಲ ಸಮಾಜವಾದಿ ಪಕ್ಷಕ್ಕೆ ಸಾದತ್ ಸೇರ್ಪಡೆಯಾಗಲಿದ್ದಾರೆ.
ರಾಜಕೀಯಕ್ಕೆ ಸೇರಲು ಅವರಿಗೆ ಪ್ರೇರಣೆ ಏನು ?
ನಾಲ್ಕು ತಿಂಗಳ ಹಿಂದೆ ಏನಾಯಿತು ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಾದತ್ ಅಲಿ ಹೇಳಿದ್ದಾರೆ. ಅದಕ್ಕಾಗಿ, ದೇಶದಲ್ಲಿ ಮಹಿಳೆಯರಿಂದ ಕಿರುಕುಳಕ್ಕೊಳಗಾದ ಪುರುಷರ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಸೇರಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ದೇಶಾದ್ಯಂತ ಇರುವ ಕ್ಯಾಬ್ ಡ್ರೈವರ್ಗಳ ಪರ ನಿಲ್ಲುವುದಾಗಿ ಅಲಿ ಹೇಳಿದ್ದಾರೆ.
ಅಲಿ ಪ್ರಕಾರ, ಅನ್ಯಾಯಕ್ಕೊಳಗಾದ ಪುರುಷರ ಬಗ್ಗೆ ಬಹಿರಂಗವಾಗದ ಹಲವಾರು ಪ್ರಕರಣಗಳಿವೆ. ತನ್ನ ಕಪಾಳಮೋಕ್ಷ ಪ್ರಕರಣದಲ್ಲಿ ತನಗೆ ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಈಗ ರಾಜಕೀಯ ಪಕ್ಷಕ್ಕೆ ಸೇರಿಕೊಂಡಿದ್ದು, ತನಗೆ ನ್ಯಾಯ ಸಿಗುತ್ತದೆ ಮತ್ತು ಇತರ ಪುರುಷರಿಗೂ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.