ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದ ತಂಡವೊಂದನ್ನು ಕೋಲ್ಕತ್ತಾದ ಬಿಧಾನ್ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೇಡ್ ಮಾಡಿದ ಸಂದರ್ಭದಲ್ಲಿ ಮೊಬೈಲ್, ಲ್ಯಾಪ್ಟಾಪ್, ದಾಖಲೆಗಳು, ಹಾರ್ಡ್ ಡಿಸ್ಕ್ ಮತ್ತು ಸಿಪಿಯುಗಳನ್ನು ವಶಕ್ಕೆ ಪಡೆದ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಮೊಬೈಲ್ ಟವರ್ಗಳ ಅಳವಡಿಸುವುದಾಗಿ ಹೇಳಿಕೊಂಡು ಜನರಿಗೆ ಈ ಗುಂಪು ವಂಚಿಸುತ್ತಾ ಬಂದಿತ್ತು ಎನ್ನಲಾಗಿದೆ. ಈ ವಂಚಕರು ಮೊಬೈಲ್ ಟವರ್ಗಳನ್ನು ಅಳವಡಿಸುವುದಾಗಿ ಖುದ್ದು ಪೊಲೀಸರಿಗೇ ಕರೆ ಮಾಡಿದಾಗ ಸಿಕ್ಕಿಬಿದ್ದಿದ್ದಾರೆ. ಹೀಗೆ ಹೇಳಿಕೊಂಡು ಏನೋ ಮಸಲತ್ತು ನಡೆಸಲಾಗುತ್ತಿದೆ ಎಂದು ಪೊಲೀಸರು ಸಂಶಯಪಟ್ಟು, ಕಾಲ್ ಸೆಂಟರ್ ಇದ್ದ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ.
ಬಿಧಾನ್ಪುರದ ಬಾಡಿಗೆ ಜಾಗವೊಂದರಲ್ಲಿ ಎರಡು ವರ್ಷಗಳಿಂದ ಈ ಕಾಲ್ ಸೆಂಟರ್ ಅನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮೊಬೈಲ್ ಟವರ್ಗಳನ್ನು ಮನೆಗಳ ಮೇಲೆ ಅಳವಡಿಸುವುದಾಗಿ ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ ಈ ವಂಚಕರು, ಇದಕ್ಕೆ ಪೂಕರವಾದ ದಾಖಲೆಗಳನ್ನು ಸೃಷ್ಟಿಸುವುದಾಗಿ ಹೇಳಿ ಸಂತ್ರಸ್ತರಿಂದ ದುಡ್ಡು ಕೀಳುತ್ತಿದ್ದರು ಎನ್ನಲಾಗಿದೆ.
ಸಿಐಡಿ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಜಾರಿಯಲ್ಲಿದೆ.