
ರಾಯಚೂರು: ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನಡೆದಿದ್ದ ನಿವೃತ್ತ ಅಧಿಕಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಅಖಿಲೇಶ್ ಮತ್ತು ಗೌತಮ್ ಬಂಧಿತ ಆರೋಪಿಗಳು. ನಿವೃತ್ತ ಶಿರಸ್ತೆದಾರ್ ಪಂಪಾಪತಿ(77) ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆ ನಂತರ ಆರೋಪಿಗಳು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಾಡಹಗಲೇ ನಡೆದಿದ್ದ ಕೊಲೆಯ ರಹಸ್ಯವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಂತಕ ಮೊಮ್ಮಗನೇ ಆಗಿರುವುದನ್ನು ತಿಳಿದು ರಾಯಚೂರು ಜನ ಶಾಕ್ ಆಗಿದ್ದಾರೆ. ಮದ್ಯವ್ಯಸನಿಯಾಗಿದ್ದ ಅಖಿಲೇಶ್ ತಾತನ ಮನೆ ದೋಚಲು ಮುಂದಾಗಿದ್ದ. ಇದಕ್ಕಾಗಿ ಗೆಳೆಯ ಗೌತಮ್ ನೆರವು ಪಡೆದುಕೊಂಡಿದ್ದ. ನವೆಂಬರ್ 21 ರಂದು ಮಧ್ಯಾಹ್ನದ ವೇಳೆಯಲ್ಲಿ ಪಂಪಾಪತಿ ಮನೆಗೆ ಬಂದಿದ್ದ ಹಂತಕರು ಬಾತ್ರೂಮ್ ಬಳಿ ಬಚ್ಚಿಟ್ಟುಕೊಂಡಿದ್ದಾರೆ. ಪಂಪಾಪತಿ ಅವರ ಪತ್ನಿ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಗೌತಮ್ ಪಂಪಾಪತಿ ಅವರ ಕಾಲು ಹಿಡಿದುಕೊಂಡಿದ್ದಾನೆ. ಅಖಿಲೇಶ್ ಚಾಕುವಿನಿಂದ ತಾತನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗೌತಮ್ ದೋಚಿದ್ದ ಹಣದಲ್ಲಿಯೇ ತನ್ನ ಪ್ರೇಯಸಿಗೆ 14 ಸಾವಿರ ರೂಪಾಯಿ ಮೊಬೈಲ್ ಕೊಡಿಸಿದ್ದ. ಅಖಿಲೇಶ್ ಮದ್ಯ ಸೇವಿಸಿ ಮಜಾ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ದೋಚಿದ್ದ ಹಣ, ಚಿನ್ನ ಜಪ್ತಿ ಮಾಡಿದ್ದಾರೆ.