ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋ ಸರೀಸೃಪ ಪ್ರಿಯರ ಮನಸ್ಸನ್ನು ಮುದಗೊಳಿಸುವುದರಲ್ಲಿ ಸಂಶಯವಿಲ್ಲ.
ಕರಿ ನಾಗರಹಾವೊಂದು ಗ್ಲಾಸ್ನಿಂದ ನೀರು ಕುಡಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವೆಂಬರ್ 15 ರಂದು ಇನ್ಸ್ಟಾಗ್ರಾಮ್ನಲ್ಲಿ ರಾಯಲ್ ಪೈಥಾನ್ಸ್ ಹ್ಯಾಂಡಲ್ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ಕಪ್ಪು ನಾಗರಹಾವಿನ ಮುಂದೆ ನೀರಿನ ಲೋಟ ಹಿಡಿದುಕೊಂಡಿದ್ದಾನೆ. ಇದನ್ನು ಗಮನಿಸಿದ ಕಪ್ಪು ನಾಗರಹಾವು ತನ್ನ ತಲೆಯನ್ನು ತಗ್ಗಿಸಿ ನೀರು ಕುಡಿಯುತ್ತದೆ.
ಇನ್ನು, ನೀರು ಕುಡಿಯುವಾಗ ಹಾವು ಆ ವ್ಯಕ್ತಿಗೆ ಯಾವುದೇ ಹಾನಿ ಮಾಡಿಲ್ಲ. ಈ ಕರಿ ನಾಗರಹಾವು ಅತ್ಯಂತ ಮಾರಣಾಂತಿಕ ಸರ್ಪಗಳಲ್ಲಿ ಒಂದಾಗಿದೆ. ನಾಗರಹಾವಿನ ಜಾತಿಗೆ ಸೇರಿದ ಈ ಹಾವು ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹಾವುಗಳು ವಿಷಕಾರಿ ಮತ್ತು 1.2 ರಿಂದ 2.2 ಮೀ (3.9 ರಿಂದ 7.2 ಅಡಿ) ಉದ್ದಕ್ಕೆ ಬೆಳೆಯಬಹುದು.
ಬಾಯಾರಿದ ವಿಷಸರ್ಪಕ್ಕೆ ವ್ಯಕ್ತಿ ಧೈರ್ಯದಿಂದ ನೀರು ಕುಡಿಸಿರುವುದಕ್ಕೆ ಸರೀಸೃಪ ಪ್ರೇಮಿಗಳು ಕೊಂಡಾಡಿದ್ದಾರೆ. ಏತನ್ಮಧ್ಯೆ, ವಿಡಿಯೊ ವೈರಲ್ ಆಗಿದ್ದು, ಇದುವರೆಗೆ 125,299 ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅಲ್ಲದೆ, ಹಾವು ಯಾವ ರೀತಿ ನೀರು ಕುಡಿಯುತ್ತದೆ ಎಂಬುದನ್ನು ತೋರಿಸಿದ್ದಕ್ಕೆ ನೆಟ್ಟಿಗರು ಧನ್ಯವಾದ ಅರ್ಪಿಸಿದ್ದಾರೆ.
https://www.youtube.com/watch?v=rS2IrktwVB0