ಕೇಂದ್ರದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮೋದನೆ ನೀಡಿದೆ. ಕೃಷಿ ಕಾನೂನುಗಳ ರದ್ದು ಮಸೂದೆ 2021ನ್ನು ನವೆಂಬರ್ 29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ನವೆಂಬರ್ 19ರಂದು ದೇಶವನ್ನುದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುತ್ತಿದೆ ಎಂದು ಘೋಷಣೆ ಮಾಡಿದ್ದರು. ಅಲ್ಲದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ಮಸೂದೆಗಳನ್ನು ಜಾರಿಗೆ ತರಲಾಗುತ್ತೆ ಎಂದು ಘೋಷಣೆ ಕೂಡ ಮಾಡಿದ್ದರು.
ರೈತರಿಗೆ ಅನುಕೂಲವಾಗಲಿ ಎಂದು ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕವೂ ದೇಶದ ಒಂದು ಭಾಗದ ರೈತರ ಮನಸ್ಸನ್ನು ಓಲೈಸುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ ಈ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯೋದಾಗಿ ಮೋದಿ ಘೋಷಣೆ ಮಾಡಿದ್ದರು.
ಪ್ರಧಾನಿ ಮೋದಿ ಘೋಷಣೆ ಬಳಿಕವೂ ಪ್ರತಿಭಟನೆಗೆ ಕೈಬಿಡದ ರೈತ ಸಂಘಟನೆಗಳು ಈ ಬಗ್ಗೆ ಸಂಸತ್ತಿನಿಂದ ಅಧಿಕೃತ ಮಾಹಿತಿ ನೀಡುವವರೆಗೂ ಧರಣಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದವು.