ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇತ್ತೀಚೆಗೆ ಪದ್ಮಶ್ರೀ ಗೌರವಕ್ಕೆ ಪುರಸ್ಕೃತರಾದ ಒಂದು ಒಳ್ಳೆಯ ಸುದ್ದಿ ಬಿಟ್ಟರೆ, ಅವರು ಹೆಚ್ಚು ಕಾಲ ವಿವಾದಗಳಿಂದಲೇ ಪ್ರಚಾರದಲ್ಲಿ ಇರುತ್ತಾರೆ. ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ವಾಪಸು ಪಡೆದು, ಪಂಜಾಬ್ ಮತ್ತು ಹರಿಯಾಣ ರೈತರು ಸಂಭ್ರಮದಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದಾರೆ.
ಇಂದಿರಾ ಗಾಂಧಿ ಮತ್ತು ಸಿಖ್ಖರನ್ನು ಪರೋಕ್ಷವಾಗಿ ಉಲ್ಲೇಖಿಸಿ, 1984 ರಲ್ಲಿ ಐರನ್ ಲೇಡಿ ಅವರು ಹೊಸಕಿ ಹಾಕಿದ್ದರು ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಿಖ್ಖರನ್ನು ಕೆರಳಿಸಿದೆ.
ಭಾನುವಾರದಂದು ಖಾರ್ ಪೊಲೀಸ್ ಠಾಣೆಗೆ ನವಿ ಮುಂಬಯಿ ಗುರುದ್ವಾರ ಅಧ್ಯಕ್ಷ ಜಸ್‌ಪಾಲ್ ಸಿಂಗ್ ಸಿಧು ಅವರ ಬೆಂಬಲದಲ್ಲಿ ಅಮರ್ ಜೀತ್ ಸಿಂಗ್ ಅವರು ಕಂಗನಾ ವಿರುದ್ಧ ದೂರು ಕೊಟ್ಟಿದ್ದರು. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಕಂಗನಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಮತ್ತು ಕೋಮು ಸೌಹಾರ್ದತೆ ಕದಡುವಂತಹ ಪೋಸ್ಟ್ ಹಾಕಿದ್ದಾರೆ ಎಂದು ಫೋಟೊ ಸಮೇತ ದೂರಲಾಗಿತ್ತು.
ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ
ಸೋಮವಾರದಂದು ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಹಾಗೂ ಶಿರೋಮಣಿ ಅಕಾಲಿ ದಳ ನಾಯಕ ಮಂಜಿದರ್ ಸಿಂಗ್ ಸಿರ್ಸಾ ಅವರು ಮುಂಬಯಿ ಎಸಿಪಿ ಸಂದೀಪ್ ಕಾರ್ಣೀಕ್ ಅವರ ಬಳಿಯೇ ಕಂಗನಾ ವಿರುದ್ಧ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಳಿಕ ಗೃಹ ಸಚಿವ ದಿಲೀಪ್ ಪಾಟೀಲ್ ಅವರನ್ನು ಸಿರ್ಸಾ ಭೇಟಿ ಮಾಡಿ ಒತ್ತಡ ಹೇರಿದ್ದಾರೆ.
ಸದ್ಯ, ದಾದರ್‌ನ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ ಸದಸ್ಯ ಅಮರ್‌ಜೀತ್ ಸಿಂಗ್ ಸಂಧು ಅವರು ಖಾರ್ ಪೊಲೀಸ್ ಠಾಣೆಯಲ್ಲಿ ಕಂಗನಾ ವಿರುದ್ಧ ಮತ್ತೊಂದು ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ಮಾಡುತ್ತಿರುವ ಆರೋಪ ಹೊರಿಸಿದ್ದಾರೆ. 1984ರ ಸಿಖ್ಖರ ಮೇಲಿನ ಹಿಂಸಾಚಾರವನ್ನು ಪರೋಕ್ಷವಾಗಿ ಕಂಗನಾ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿ, ಸಿಖ್ಖರ ಹತ್ಯೆಗೆ ಸಂತಸಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.