ರಾಜ್‌ಕೋಟ್: ತಮ್ಮ ವಿವಾಹದ ದಿನದಂದು ಹೆಚ್ಚಿನ ಎಲ್ಲಾ ವಧುಗಳು ಮದುವೆ ಶಾಸ್ತ್ರದ ಜೊತೆಗೆ ಮೇಕಪ್, ಫೋಟೋಶೂಟ್ ಅಂತೆಲ್ಲಾ ಬ್ಯುಸಿಯಾಗಿದ್ದರೆ, ಇಲ್ಲೊಬ್ಬಳು ವಧು ಸ್ವಲ್ಪ ಡಿಫರೆಂಟೆ. ಯಾಕೆಂದರೆ, ತನಗೆ ಶಿಕ್ಷಣವೇ ಹೆಚ್ಚು ಮುಖ್ಯ ಅಂತಾ ಈಕೆ ಪರೀಕ್ಷೆ ಬರೆಯಲು ಹಾಜರಾಗಿದ್ದಾಳೆ.
ಹೌದು, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ವಧು ತನ್ನ ಮದುವೆಗೆ ಮುಂಚೆಯೇ ವಿಶ್ವವಿದ್ಯಾಲಯದ ಪರೀಕ್ಷೆಗೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ವಧುವನ್ನು ಶಿವಂಗಿ ಬಗ್ತಾರಿಯಾ ಎಂದು ಗುರುತಿಸಲಾಗಿದ್ದು, ಮದುವೆಯ ಉಡುಪು ಹಾಗೂ ಆಭರಣಗಳನ್ನು ಧರಿಸಿ ಪರೀಕ್ಷೆ ಬರೆದಿದ್ದಾಳೆ.
ವಧು ಶಿವಾಂಗಿ ಬಗ್ತಾರಿಯಾ ಬಿಎಸ್‍ಡಬ್ಲ್ಯೂನ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಶಾಂತಿನಿಕೇತನ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾಳೆ. ಮದುವೆಯ ದಿನದಂದೇ ಪರೀಕ್ಷೆ ಇದ್ದಿದ್ದರಿಂದ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪದ ಈಕೆ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಈಕೆಯ ನಿರ್ಧಾರಕ್ಕೆ ಎರಡೂ ಕುಟುಂಬಗಳು ಕೂಡ ಒಪ್ಪಿಗೆ ಸೂಚಿಸಿವೆ. ಕೆಂಪು ಬಣ್ಣದ ಲೆಹೆಂಗಾ, ಭಾರಿ ಆಭರಣಗಳನ್ನು ಧರಿಸಿ, ಇತರೆ ವಿದ್ಯಾರ್ಥಿಗಳೊಂದಿಗೆ ಈಕೆ ಪರೀಕ್ಷೆ ಬರೆದಿದ್ದಾಳೆ.
ತನ್ನ ಮದುವೆಯ ದಿನಾಂಕವನ್ನು ಅಂತಿಮಗೊಳಿಸಿದಾಗ ಪರೀಕ್ಷಾ ವೇಳಾಪಟ್ಟಿ ಘೋಷಿಸಿರಲಿಲ್ಲ. ಬಳಿಕ ಪರೀಕ್ಷಾ ವೇಳಪಟ್ಟಿ ಬಿಡುಗಡೆಯಾದಾಗ ಮದುವೆಯ ಮುಹೂರ್ತದ ದಿನದಂದೇ ಈಕೆಗೆ ಪರೀಕ್ಷೆಯೂ ಇತ್ತು. ಹೀಗಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ವಧು ತನ್ನ ಮದುವೆ ಸಮಾರಂಭದಲ್ಲಿ ಭಾಗವಹಿಸಿದಳು.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 4,34,848 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಶಿವಾಂಗಿ ತನ್ನ ಶಿಕ್ಷಣಕ್ಕೆ ಆದ್ಯತೆ ನೀಡಿರುವ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.