ಇನ್ನೇನು ಹಸೆಮಣೆ ಏರಬೇಕಿದ್ದ ಯುವಕ ಸೀದಾ ಪೊಲೀಸ್ ಠಾಣೆ ಅತಿಥಿಯಾದ ಶಾಕಿಂಗ್ ಘಟನೆಯೊಂದು ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ.
ಪ್ರೇಯಸಿಗೆ ವಂಚಿಸಿ ಮತ್ತೊಬ್ಬಾಕೆಯನ್ನು ಮದುವೆಯಾಗಲು ಹೊರಟಿದ್ದವನನ್ನು ಧನ್ಬಾಗ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ.
ಪರ್ಬಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಹುಲ್ ಕುಮಾರ್ ಎಂಬಾತ ಮದುವೆಯಾಗೋದಾಗಿ ನಂಬಿಸಿ ನನ್ನ ಮೇಲೆ 5 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಧನಬಾದ್ ನಿವಾಸಿ ಯುವತಿ ಧನಬಾದ್ ಠಾಣೆಯಲ್ಲಿ ದೂರು ನೀಡಿದ್ದಳು. ಈತ ಮತ್ತೊಬ್ಬ ಯುವತಿಯ ಜೊತೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾನೆ ಎಂಬ ವಿಚಾರ ಕೂಡ ಪೊಲೀಸರಿಗೆ ತಿಳಿಯಿತು. ಸ್ಥಳೀಯ ಪೊಲೀಸರ ನೆರವಿನಿಂದ ರಾಹುಲ್ನನ್ನು ಪತ್ತೆ ಹೆಚ್ಚಿದ ಧನ್ಬಾದ್ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತ್ರಸ್ತೆಯು ನೀಡಿರುವ ಮಾಹಿತಿಯ ಪ್ರಕಾರ, ರಾಹುಲ್ ಆಕೆಯನ್ನು ಮದುವೆಯಾಗುವ ನೆಪದಲ್ಲಿ ಐದು ವರ್ಷಗಳ ಕಾಲ ಲೈಂಗಿಕ ಸುಖಕ್ಕಾಗಿ ಬಳಸಿಕೊಂಡಿದ್ದನು. ಮಾತ್ರವಲ್ಲದೇ ಆಕೆಗೆ ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿದ್ದಾನೆ. ಎರಡೂ ಮನೆಯಲ್ಲಿ ಮದುವೆಗೆ ಇಷ್ಟವಿದ್ದರೂ ಸಹ ರಾಹುಲ್ ಮಾತ್ರ ಮದುವೆ ವಿಚಾರದಲ್ಲಿ ಸಂತ್ರಸ್ತೆಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಆಕೆಗೆ ಮೋಸ ಮಾಡಿ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಲು ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ.