ನಗದಿನ ಅಗತ್ಯಕ್ಕೆ ಎಟಿಎಂನಿಂದ ಹಣ ಹಿಂಪಡೆಬೇಕಾಗಿದ್ದೀರಾ ? ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಗ್ರಾಹಕರಾಗಿದ್ದಲ್ಲಿ, ಎಟಿಎಂನಿಂದ ಹಣ ಹಿಂಪಡೆಯುವ ವೇಳೆ ಕೆಳಕಂಡ ವಿಚಾರದ ಬಗ್ಗೆ ಜಾಗರೂಕರಾಗಿರಬೇಕು.
ತನ್ನ ಗ್ರಾಹಕರ ಹಣದ ಭದ್ರತೆಯ ದೃಷ್ಟಿಯಿಂದ ಎಸ್.ಬಿ.ಐ ಹೊಸದಾಗಿ ಓಟಿಪಿ ಆಧರಿತ ನಗದು ಹಿಂಪಡೆತದ ವ್ಯವಸ್ಥೆಗೆ ಚಾಲನೆ ಕೊಡುವ ಮೂಲಕ ಅಸಿಂಧುವಾದ ವಹಿವಾಟುಗಳ ಸಾಧ್ಯತೆಗಳನ್ನು ಕಡಿಮೆ ಮಾಡಿದೆ. ಎಸ್.ಬಿ.ಐ ಇಂಥ ಪರಿಸ್ಥಿತಿಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಇದೇ ಮೊದಲಲ್ಲ.
“ಎಸ್.ಬಿ.ಐ ಎಟಿಎಂಗಳಲ್ಲಿ ಹಣದ ವಹಿವಾಟು ಮಾಡುವ ಸಂದರ್ಭದಲ್ಲಿ ಓಟಿಪಿ ಆಧರಿತ ನಗದು ಹಿಂಪಡೆದ ವ್ಯವಸ್ಥೆ ವಂಚಕರ ವಿರುದ್ಧದ ಲಸಿಕೆ ಇದ್ದಂತೆ. ನಿಮ್ಮನ್ನು ವಂಚಕರಿಂದ ಕಾಪಾಡುವುದು ಸದಾ ನಮ್ಮ ಮೊದಲ ಆದ್ಯತೆ,” ಎಂದು ಎಸ್.ಬಿ.ಐ ಟ್ವೀಟ್ ಮಾಡಿದೆ.
ಗ್ರಾಹಕರ ನೋಂದಾಯಿತ ಸಂಖ್ಯೆಗೆ ಬರುವ ಓಟಿಪಿಯನ್ನು ಹಣ ಹಿಂಪಡೆಯವ ಸಂದರ್ಭದಲ್ಲಿ ಎಟಿಎಂನಲ್ಲಿ ನಮೂದಿಸಬೇಕಾಗುತ್ತದೆ. ನಾಲ್ಕು ಅಂಕಿಯ ಈ ಓಟಿಪಿ ಕಾರ್ಡ್‌ದಾರರ ವ್ಯವಹಾರವನ್ನು ಖಾತ್ರಿ ಪಡಿಸುತ್ತದೆ. ಕಳೆದ ಜನವರಿಯಿಂದ ಚಾಲ್ತಿಯಲ್ಲಿರುವ ಈ ವ್ಯವಸ್ಥೆಯು 10,000 ರೂ. ಮೇಲ್ಪಟ್ಟ ನಗದಿನ ಹಿಂಪಡೆತಕ್ಕೆ ಅನ್ವಯಿಸುತ್ತದೆ.
ಇದೇ ವೇಳೆ ಹುಸಿ ಗ್ರಾಹಕ ಸೇವಾ ಕೇಂದ್ರಗಳ ಬಗ್ಗೆ ಜಾಗರೂಕತೆಯಿಂದ ಇರಲು ಎಸ್.ಬಿ.ಐ ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಎಸ್.ಬಿ.ಐ.ನ ಅಧಿಕೃತ ಗ್ರಾಹಕ ಸೇವಾ ಕೇಂದ್ರಗಳ ಸಂಖ್ಯೆಗಳಿಗೆ ಬ್ಯಾಂಕಿನ ಅಧಿಕೃತ ಜಾಲತಾಣವನ್ನು ರೆಫರ್ ಮಾಡಲು ಸಹ ಎಸ್.ಬಿ.ಐ. ತಿಳಿಸುತ್ತಲೇ ಬಂದಿದೆ.