ಕೋವಿಡ್ ಲಸಿಕಾಕರಣ ಹಾಗೋ ಹೀಗೋ ಶತಕೋಟಿ ಸಂಖ್ಯೆ ದಾಟಿಕೊಂಡು ದೇಶವಾಸಿಗಳಿಗೆಲ್ಲಾ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ಪ್ರಯತ್ನ ಮಾಡುತ್ತಿವೆ. ಈ ನಡುವೆ ಕೋವಿಡ್ನ ಡೆಲ್ಟಾವತಾರಿ ವೈರಾಣು ಹಾಗೂ ಅದಕ್ಕೊಂದು ಬೂಸ್ಟರ್ ಡೋಸ್ ಅನ್ನು ಪ್ರತಿಯೊಬ್ಬರಿಗೂ ಕೊಡಬೇಕೇ ಎಂಬ ಚರ್ಚೆಗಳು ತೀವ್ರವಾಗಿಯೂ ಸಾಗಿವೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಭಾರತೀಯ ಮದ್ದು ಸಂಶೋಧನಾ ಸಮಿತಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ, ಕೋವಿಡ್-19 ವಿರುದ್ಧ ಬೂಸ್ಟರ್ ಡೋಸ್ ಬೇಕೆಂಬ ಮಾತಿಗೆ ವೈಜ್ಞಾನಿಕ ಸ್ಪಷ್ಟೀಕರಣ ಸದ್ಯಕ್ಕಂತೂ ಇಲ್ಲ ಎಂದಿದ್ದು, ಸದ್ಯಕ್ಕೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯ ಎರಡನೇ ಚುಚ್ಚುಮದ್ದು ನೀಡುವುದು ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.
ಮೂಲಗಳ ಪ್ರಕಾರ, ಭಾರತದಲ್ಲಿ ಲಸಿಕಾಕರಣದ ರಾಷ್ಟ್ರೀಯ ಸಲಹಾ ಸಮಿತಿಯ (ಎನ್ಟಿಎಜಿಐ) ಮುಂದಿನ ಭೇಟಿ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
“ಇಂಥ ವಿಷಯದಲ್ಲಿ ಸರ್ಕಾರ ನೇರವಾದ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ ಎಂದು ಐಸಿಎಂಆರ್ ತಿಳಿಸಿದ ಬಳಿಕ ಈ ವಿಚಾರವನ್ನು ನಾವು ಪರಿಗಣಿಸುತ್ತೇವೆ,” ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಲಸಿಕೆ ಪಡೆಯಲು ಅರ್ಹರಾದ ದೇಶದ ಜನತೆಯ ಪೈಕಿ 82%ನಷ್ಟು ಮಂದಿ ಮೊದಲ ಚುಚ್ಚುಮದ್ದು ಪಡೆದಿದ್ದಾರೆ. ಇದೇ ವೇಳೆ 43%ನಷ್ಟು ಮಂದಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ.
ಇದುವರೆಗೂ ದೇಶಾದ್ಯಂತ 116.87 ಕೋಟಿಯಷ್ಟು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಇನ್ನೂ ಮೊದಲ ಡೋಸ್ ತೆಗೆದುಕೊಳ್ಳದ ಹಾಗೂ ಎರಡನೇ ಡೋಸ್ ಚುಚ್ಚುಮದ್ದುಗಳನ್ನು ಪಡೆಯುವುದು ಬಾಕಿ ಇರುವ ಮಂದಿಗೆ ಮನೆ ಮನೆಗೆ ತಲುಪಿ ಲಸಿಕೆಗಳನ್ನು ನೀಡುವ ’ಹರ್ ಘರ್ ದಸ್ತಕ್’ ಅಭಿಯಾನಕ್ಕೆ ಭಾರತ ಸರ್ಕಾರ ಚಾಲನೆ ಕೊಟ್ಟಿದೆ.
ಲಸಿಕೆಯ ಎರಡು ಚುಚ್ಚುಮದ್ದುಗಳ ನಡುವಿನ ಅವಧಿ ಮುಗಿದರೂ ಸಹ ಇನ್ನೂ ಲಸಿಕೆ ಪಡೆಯದೇ ಇರುವ ಮಂದಿ 12 ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.