ಮಂಗಳೂರು: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಮುಂಡ್ಯ ಕರಂಟಿಯಡ್ಕದಲ್ಲಿ ನಡೆದಿದೆ.
ಸುಳ್ಯಪದವು ಶಬರಿ ನಗರದ ನಿವಾಸಿ ರವಿರಾಜ್ ಪೂಜಾರಿ(31) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ ನವೆಂಬರ್ 19 ರಂದು ಊರಿಗೆ ಮರಳಿದ್ದರು. ವಿಟ್ಲ ಸಮೀಪದ ಯುವತಿಯೊಂದಿಗೆ ನಿಶ್ಚಿತಾರ್ಥ ನವೆಂಬರ್ 25 ರಂದು ನಡೆಯಬೇಕಿತ್ತು. ನವೆಂಬರ್ 20 ರಂದು ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ರವಿರಾಜ್ ನಾಪತ್ತೆಯಾಗಿದ್ದರು.
ರವಿರಾಜ್ ಕುಂದಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದರು. ಯುವತಿ ಮನೆಯಲ್ಲಿ ವಿಷಯ ಪ್ರಸ್ತಾಪಿಸಿ ರವಿರಾಜ್ ಅವರ ಮನೆಗೆ ಬರುವವರಿದ್ದರು. ಆದರೆ, ಮನೆಯಲ್ಲಿ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ನಿಗದಿ ಮಾಡಿದ್ದರಿಂದ ಆತಂಕಗೊಂಡ ರವಿರಾಜ್ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.