ಕೊರೊನಾ ಮೊದಲ ಅಲೆಯ ಸಮಯದಲ್ಲಿ, ನರೇಂದ್ರ ಮೋದಿ ಸರ್ಕಾರ, ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಶುರು ಮಾಡಿತ್ತು. ಅದ್ರ ಪ್ರಯೋಜನ ಈಗ ಗೋಚರಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಿರುದ್ಯೋಗಿಗಳಾಗಿರುವ ಜನರಿಗೆ ಈ ಯೋಜನೆಯಡಿ ಈಗ ಲಾಭ ಸಿಗ್ತಿದೆ. ಈ ಯೋಜನೆಯಡಿಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ಸುಮಾರು 3.29 ಮಿಲಿಯನ್ ಉದ್ಯೋಗ ಸೃಷ್ಟಿಸಲಾಗಿದೆ.
ಇಪಿಎಫ್‌ಒ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ ಪ್ರಾರಂಭವಾದ ಒಂದು ವರ್ಷದ ನಂತರ, ಈ ಯೋಜನೆಯಡಿ ದೇಶದಲ್ಲಿ ಸುಮಾರು 3.29 ಮಿಲಿಯನ್ ಜನರಿಗೆ ಉದ್ಯೋಗ ಸೃಷ್ಟಿಸಲಾಗಿದೆ. ಮಾರ್ಚ್ 31,2022 ರಂದು ಈ ಯೋಜನೆ ಮುಕ್ತಾಯಗೊಳ್ಳಲಿದೆ. ಈ ವೇಳೆಗೆ ಸುಮಾರು 5.85 ಮಿಲಿಯನ್ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಮುಂದಿನ ಆರು ತಿಂಗಳಲ್ಲಿ 2.56 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ. ಒಟ್ಟು ಉದ್ಯೋಗಗಳಲ್ಲಿ, 2.88 ಮಿಲಿಯನ್ ಹೊಸ ಉದ್ಯೋಗಿಗಳಾಗಿದ್ದರೆ, 0.41 ಮಿಲಿಯನ್ ಮರು ಉದ್ಯೋಗ ಪಡೆದ ಫಲಾನುಭವಿಗಳಾಗಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಸ್ವಾವಲಂಬಿ ಭಾರತ ಉದ್ಯೋಗ ಯೋಜನೆಯನ್ನು ನವೆಂಬರ್ 2020 ರಲ್ಲಿ ಪ್ರಾರಂಭಿಸಲಾಯಿತು.
ಅಕ್ಟೋಬರ್ 1, 2020 ರಿಂದ ಜೂನ್ 30, 2021 ರವರೆಗೆ ಈ ಯೋಜನೆಯನ್ನು ನಿಗದಿಪಡಿಸಲಾಗಿತ್ತು. ಆದ್ರೆ ಕೊರೊನಾ ಹಿನ್ನಲೆಯಲ್ಲಿ ಯೋಜನೆಯನ್ನು ಮಾರ್ಚ್ 31,2022 ರವರೆಗೆ ವಿಸ್ತರಿಸಲಾಗಿದೆ.
ಈ ಯೋಜನೆಯಡಿಯಲ್ಲಿ, ಅಕ್ಟೋಬರ್ 1, 2020 ಮತ್ತು ಮಾರ್ಚ್ 31, 2022 ರ ನಡುವೆ 1,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ರಚಿಸಲಾದ ಎಲ್ಲಾ ಹೊಸ ಉದ್ಯೋಗಗಳಿಗೆ ಸರ್ಕಾರ ಎರಡು ವರ್ಷಗಳವರೆಗೆ ಶೇಕಡಾ 24ರಷ್ಟು ಪರಿಹಾರ ನೀಡಲಿದೆ. ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ.