ಬೆಂಗಳೂರು: ಜೇಷ್ಠತೆ ಹೊಂದಿದ ಎಲ್ಲಾ ವರ್ಗದವರಿಗೆ 6 ತಿಂಗಳಿಗೊಮ್ಮೆ ಮುಂಬಡ್ತಿ ನೀಡಲಾಗುವುದು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ಸಂಬಂಧಿಸಿದಂತೆ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ನಿಯಮಾವಳಿಗಳು ಇವೆ. ಈಗ ಎಲ್ಲ ವರ್ಗದ ಸರ್ಕಾರಿ ನೌಕರರಿಗೆ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಮುಂಬಡ್ತಿ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಈ ಮೂಲಕ ಎಲ್ಲ ಇಲಾಖೆಗಳಿಗೆ ಒಂದೇ ರೀತಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಜಂಟಿ ಸಮಾಲೋಚನಾ ಸಮಿತಿ ಈ ಬಗ್ಗೆ ಒಲವು ತೋರಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ನಾಗರೀಕ ಸೇವೆಗಳ ನಿಯಮಾವಳಿಗಳ ಪ್ರಕಾರ, ನೌಕರರ ಜೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸಿ ಪ್ರತಿವರ್ಷ ಅರ್ಹತೆಗೆ ಅನುಸಾರವಾಗಿ ಬಡ್ತಿ ನೀಡಬೇಕಿದೆ. ಆದರೆ, ಕೆಲವು ಇಲಾಖೆಗಳಲ್ಲಿ ಮುಂಬಡ್ತಿ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕಾರಣದಿಂದ ಒಂದೇ ರೀತಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ ಅನುಷ್ಠಾನಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.