ಡೆಹ್ರಾಡೂನ್: ಇದು ಬರೋಬ್ಬರಿ 30 ವರ್ಷಗಳ ಸುದೀರ್ಘ ಕಾನೂನು ಹೋರಾಟ ಮಾಡಿರುವ ವ್ಯಕ್ತಿಯೊಬ್ಬರ ಜೀವನಗಾಥೆ. ಮೆರಿಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಶಿಕ್ಷಕರ ಹುದ್ದೆಗೆ ನೇಮಕವಾಗದ ಜೆರಾಲ್ಡ್ ಜಾನ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
1989 ರಲ್ಲಿ, ಪತ್ರಿಕೆಯೊಂದರಲ್ಲಿ ಜಾಹೀರಾತನ್ನು ಗಮನಿಸಿದ, ಆಗ 24 ವರ್ಷವಾಗಿದ್ದ ಜೆರಾಲ್ಡ್ ಜಾನ್ ಎಂಬುವವರು ಡೆಹ್ರಾಡೂನ್‌ನ ಸರ್ಕಾರಿ ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾದ ಸಿಎನ್ಐ ಬಾಯ್ಸ್ ಇಂಟರ್ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಂದರ್ಶನದಲ್ಲಿ ತೇರ್ಗಡೆಯಾಗಿ ಮೆರಿಟ್ ಲಿಸ್ಟ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರೂ ಉದ್ಯೋಗ ಮಾತ್ರ ದೊರೆತಿರಲಿಲ್ಲ.
ಕೆಲಸ ಸಿಗದಿರುವುದರಿಂದ ದಿಗ್ಭ್ರಮೆಗೊಂಡ ಜಾನ್ 1990ರಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಯುಪಿಯಿಂದ ಉತ್ತರಾಖಂಡ ಪ್ರತ್ಯೇಕವಾದ ನಂತರ, ಪ್ರಕರಣವನ್ನು ನೈನಿತಾಲ್‌ನ ಹೈಕೋರ್ಟ್‍ಗೆ ವರ್ಗಾಯಿಸಲಾಯಿತು. ಅವರು 55 ವರ್ಷಕ್ಕೆ ಕಾಲಿಟ್ಟಾಗ, ಉತ್ತರಾಖಂಡದ ಹೈಕೋರ್ಟ್ ಡಿಸೆಂಬರ್ 2020 ರಲ್ಲಿ ಜಾನ್ ಪರವಾಗಿ ತೀರ್ಪು ನೀಡಿದೆ. ಜಾನ್ ಅವರ ನೇಮಕ ಹಾಗೂ ಪರಿಹಾರವಾಗಿ 80 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಇದರಲ್ಲಿ ಜಾನ್‌ಗೆ ಉತ್ತರಾಖಂಡ ಸರ್ಕಾರವು ಕೆಲವು ತಿಂಗಳ ಹಿಂದೆ 73 ಲಕ್ಷ ರೂ. ಪಾವತಿಸಿದೆ.
ತಮ್ಮ ಸುದೀರ್ಘ ಹೋರಾಟದ ಬಗ್ಗೆ ನೆನಪಿಸಿಕೊಳ್ಳುತ್ತಾ, ಅವರು ಸಂದರ್ಶನದಲ್ಲಿ ತೇರ್ಗಡೆಯಾಗಿದ್ದರೂ ಮತ್ತು ಮೆರಿಟ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ, ಅವರಿಗೆ ಕೆಲಸ ಸಿಗದಿದ್ದಾಗ ತುಂಬಾ ಆಘಾತಕ್ಕೊಳಗಾಗಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅಭ್ಯರ್ಥಿ ಆಯ್ಕೆಯಾಗಲು ಸ್ಟೆನೋಗ್ರಫಿ ಕೌಶಲ್ಯ ಹೊಂದಿರಬೇಕು ಎಂದು ತಿಳಿಸಲಾಯಿತು. ಆದರೆ, ಕೆಲಸದ ಪಟ್ಟಿಯಲ್ಲಿ ಅಗತ್ಯವಿರುವ ಮಾನದಂಡಗಳಲ್ಲಿ ಒಂದಾಗಿ ಸ್ಟೆನೋಗ್ರಫಿಯನ್ನು ಉಲ್ಲೇಖಿಸಿರಲಿಲ್ಲ. ಕೆಲಸ ಪಡೆದ ಅಭ್ಯರ್ಥಿ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದಾಗಿ ಜಾನ್ ವಿವರಿಸಿದ್ದಾರೆ.