ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಹಲವು ಗ್ರಾಮಗಳು ಜಾಲಾವೃತಗೊಂಡಿದ್ದು, ನೂರಾರು ಮನೆಗಳು ಕುಸಿದು ಬಿದ್ದಿವೆ, ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿವೆ. ಬೆಳೆದ ಬೆಳೆ ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ.
ಬರದನಾಡು ಎಂದೇ ಕರೆಯಲಾಗುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 50 ವರ್ಷಗಳ ಇತಿಹಾಸದಲ್ಲಿಯೇ ಇಂಥಹ ರಣಭೀಕರ ಮಳೆ ನೋಡಿರಲಿಲ್ಲ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರ್, ಮೂವರು ಜಲಸಮಾಧಿ
ಜಿಲ್ಲೆಯಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಈಗಾಗಲೇ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, 436 ಮನೆಗಳು ನೆಲಸಮವಾಗಿವೆ. ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜನರು ನೀರಿಗಿಳಿಯುವ ದುಸ್ಸಾಹಸ ಮಾಡಬಾರದು. ಎಚ್ಚರಿಕೆ ನಡುವೆಯೂ ಹಲವರು ನೀರಿಗಿಳಿಯುವ ಮೂಲಕ ಪ್ರಾಣಾಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.