ಕೊರೋನಾದಿಂದ ಮಹಾಮಾರಿಯಿಂದ ತತ್ತರಿಸಿದ ಜನ ಈಗ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಬದುಕು ಕಟ್ಟಿಕೊಳ್ಳುವ ಮೊದಲೇ ಮಳೆ ಸಂಕಷ್ಟ ತಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕಣ್ಣಮುಂದೆಯೇ ಬೆಳೆ ಕೊಚ್ಚಿ ಹೋಗುತ್ತಿದೆ. ಅನ್ನದಾತರು ಆಪತ್ತಿನಲ್ಲಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 7.31 ಲಕ್ಷ ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯಕರ್ನಾಟಕ, ಹಳೇಮೈಸೂರು, ಬಯಲುಸೀಮೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆಯ ರುದ್ರನರ್ತನ ಮುಂದುವರೆದಿದೆ ಎಂದು ಹೇಳಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೂಡಲೇ ಸಚಿವರನ್ನು ಜಿಲ್ಲೆಗಳಿಗೆ ಅಟ್ಟಬೇಕು. ಬೆಳೆ ಹಾನಿ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕೃಷಿ ಸಚಿವರು ಮತ್ತು ಅವರ ಇಲಾಖೆ, ಕಂದಾಯ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆಯೇ? ವಿಮೆ ಪರಿಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದ್ದು, ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.