ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆಯು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ಮುಂಜಾನೆ ಮೂರು ಗಂಟೆ ಸುಮಾರಿಗೆ ಸಂಭವಿಸಿದೆ.
ಮೂರು ಅಂತಸ್ತಿನ ಕಟ್ಟಡವು ಸಮೀಪದಲ್ಲೇ ಇದ್ದ ಎರಡು ಅಂತಸ್ತಿನ ಕಟ್ಟಡದ ಮೇಲೆ ಕುಸಿದಿದೆ. ಅವಶೇಷಗಳ ಅಡಿಯಲ್ಲಿ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಈಗಾಗಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು ರಕ್ಷಣಾ ಪಡೆ ಸಿಬ್ಬಂದಿ ಆರು ಮಂದಿಯನ್ನು ಅವಶೇಷಗಳ ಅಡಿಯಿಂದ ಹೊರ ತೆಗೆದಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ. ಆಂಧ್ರ ಪ್ರದೇಶದ ಹಲವೆಡೆ ಶುಕ್ರವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮೂರು ರಾಯಲ್ಸೀಮಾ ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶದ 1 ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ 20 ಸೆಂಟಿಮೀಟರ್ವರೆಗೆ ಮಳೆ ದಾಖಲಾಗಿದೆ. ವರುಣನ ಆರ್ಭಟಕ್ಕೆ ಈವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ವಿಚಾರವಾಗಿ ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ಮೋಹನ ರೆಡ್ಡಿಗೆ ಕರೆ ಮಾಡಿದ್ದು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಯಾವುದೇ ಸಹಾಯ ಬೇಕಿದ್ದಲ್ಲಿ ಕೇಂದ್ರದಿಂದ ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ. ಸಿಎಂ ಜಗನ್ಮೋಹನ ರೆಡ್ಡಿ ಇಂದು ಪ್ರವಾಹದ ಪರಿಸ್ಥಿತಿ ಅರಿಯಲು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.