ರಾಂಚಿಯ ಜೆ.ಎಸ್.ಸಿ.ಎ. ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 20 ಓವರುಗಳಲ್ಲಿ 6 ವಿಕೆಟ್ ಗೆ 153 ರನ್ ಗಳಿಸಿದ್ದು, ಭಾರತದ 17.2 ಗಳಲ್ಲಿ 3 ವಿಕೆಟ್ ಗೆ 155 ರನ್ ಗಳಿಸಿದೆ.
ಈ ಪಂದ್ಯದ ಗೆಲುವಿನೊಂದಿಗೆ ಭಾರತ ಟಿ20 ಸರಣಿ ವಶಪಡಿಸಿಕೊಂಡಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮ ಚೊಚ್ಚಲ ಸರಣಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದರೊಂದಿಗೆ ಮುಂದಿನ ಪಂದ್ಯದಲ್ಲಿ ಬದಲಾವಣೆಯ ಬಗ್ಗೆ ರೋಹಿತ್ ಶರ್ಮ ಸುಳಿವು ನೀಡಿದ್ದಾರೆ. ಮುಗಿದ ನಂತರ ಮಾತನಾಡಿದ ರೋಹಿತ್ ಶರ್ಮ, ಎಲ್ಲ ವಿಭಾಗಗಳಲ್ಲಿಯೂ ನಮ್ಮ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಯುವ ಪಡೆ ಇದೆ. ಆದರೆ, ಹೆಚ್ಚಿನ ಪಂದ್ಯಗಳನ್ನು ಆಡದ ಆಟಗಾರರಿದ್ದು, ಅವರಿಗೂ ಸಮಯ ನೀಡಬೇಕು. ಬೆಂಚ್ ಬಲ ಉತ್ತಮವಾಗಿದ್ದು, ಅವರಿಗೂ ಅವಕಾಶ ನೀಡುವ ಬಗ್ಗೆ ಚಿಂತನೆ ಇದೆ ಎಂದಿದ್ದಾರೆ.
ಮುಂದಿನ ಪಂದ್ಯದ ವೇಳೆ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಈಗಲೇ ತೀರ್ಮಾನ ಕೈಗೊಳ್ಳುವುದಿಲ್ಲ. ತಂಡಕ್ಕೆ ಅಗತ್ಯವಿರುವ ಬದಲಾವಣೆ ಮಾಡುತ್ತೇವೆ. ತಂಡದಲ್ಲಿನ ಬೆಂಚ್ ಆಟಗಾರರಿಗೂ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.