ನವದೆಹಲಿ: ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ರೈತರು ನಡೆಸಿದ ಹೋರಾಟದ ಕೇಂದ್ರಬಿಂದುವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಘೋಷಣೆ ಮಾಡಿದ್ದು, ಪ್ರತಿಭಟನಾನಿರತ ರೈತರು ಮನೆಗೆ ಮರಳುವಂತೆ ಮನವಿ ಮಾಡಿದ್ದಾರೆ. ಪ್ರಧಾನಿಯವರ ಈ ಮಹತ್ವದ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು ನಡೆಸಿದ ಸತ್ಯಾಗ್ರಹ ದುರಹಂಕಾರವನ್ನು ಸೋಲಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಊಹಿಸಿದ್ದ ರಾಹುಲ್ ಗಾಂಧಿ ತಮ್ಮ ಹಳೆಯ ವಿಡಿಯೋವನ್ನು ಈಗ ಮರು ಟ್ವೀಟ್ ಮಾಡಿದ್ದಾರೆ. ನನ್ನ ಹೇಳಿಕೆಯನ್ನು ಬರೆದಿಟ್ಟುಕೊಳ್ಳಿ. ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುತ್ತದೆ ಎಂಬ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ನಾನು ರೈತರೊಂದಿಗೆ ನಿಲ್ಲುತ್ತೇನೆ. ರೈತರ ವಿರೋಧಕ್ಕೆ ಕಾರಣವಾಗಿರುವ ಕಾಯ್ದೆಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ನನ್ನ ಮಾತುಗಳನ್ನು ಮಾರ್ಕ್ ಮಾಡಿಕೊಳ್ಳಿ. ರೈತರ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂದು ರಾಹುಲ್ ಗಾಂಧಿ 2021ರ ಜನವರಿ 14ರಂದು ನೀಡಿದ ಹೇಳಿಕೆಯ ವಿಡಿಯೋವನ್ನು ಮತ್ತೆ ಟ್ವೀಟ್ ಮಾಡಲಾಗಿದ್ದು, ವಿಡಿಯೋ ವೈರಲ್ ಆಗಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಯವರ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.