ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರ ಬಾಬು ನಾಯ್ಡು ಪತ್ರಿಕಾಗೋಷ್ಠಿ ನಡೆಸುವ ವೇಳೆಯಲ್ಲಿ ಭಾವುಕರಾದರು. ರಾಜ್ಯದಲ್ಲಿ ಜಗನ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ರು.
ತಮ್ಮ ಕೈಗಳಿಂದ ಮುಖವನ್ನು ಮುಚ್ಚಿಕೊಂಡ ಚಂದ್ರಬಾಬು ನಾಯ್ಡು ಗಳಗಳನೇ ಕಣ್ಣೀರು ಸುರಿಸಿದ್ರು. ಅಲ್ಲದೇ ತಾನು ಮತ್ತೆ ಈ ರಾಜ್ಯದ ಸಿಎಂ ಆಗುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಶಪಥಗೈದಿದ್ದಾರೆ.
ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಮಹಿಳಾ ಸಬಲೀಕರಣ ವಿಚಾರವಾಗಿ ನಡೆದ ಚರ್ಚೆಯಲ್ಲಿ ವಿಧಾನಸಭೆ ಆಡಳಿತ ಪಕ್ಷದ ನಾಯಕರು ತಮ್ಮ ಪತ್ನಿಯ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ರು.
ವಿಧಾನಸಭೆ ಅಧಿವೇಶನವನ್ನು ಕೌರವರ ಸಭೆ ಎಂದು ಕರೆದ ಚಂದ್ರಬಾಬು ನಾಯ್ಡು, ವೈಎಸ್ಆರ್ಸಿಪಿ ಮಂತ್ರಿಗಳು ಹಾಗೂ ಶಾಸಕರ ಕೊಳಕು ಪಾತ್ರಗಳನ್ನು ಖಂಡಿಸುತ್ತಿರುವ ನಾನು 2024ರವರೆಗೂ ಅಧಿವೇಶನವನ್ನು ಬಹಿಷ್ಕರಿಸುತ್ತೇನೆ ಎಂದು ಗುಡುಗಿದ್ರು.
ನಾನು ದಶಕಗಳಿಂದ ರಾಜಕೀಯದಲ್ಲಿ ಇದ್ದೇನೆ. ಆದರೆ ನಾನೆಂದಿಗೂ ಯಾರನ್ನೂ ಇಷ್ಟೊಂದು ಅಪಮಾನ ಮಾಡಿಲ್ಲ. ವಿರೋಧ ಪಕ್ಷದವರನ್ನೂ ನಾನು ಈ ರೀತಿ ನಡೆಸಿಕೊಂಡಿರಲಿಲ್ಲ ಎಂದು ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ರು.