ಬೆಂಗಳೂರು: ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹದಳದಿಂದ(ಎಸಿಬಿ) ದಾಳಿ ನಡೆದಿದೆ. ಬಿಡಿಎ ಕಚೇರಿಯಲ್ಲಿ ಕಂತೆಗಟ್ಟಲೆ ಹಣ ಜಪ್ತಿ ಮಾಡಲಾಗಿದೆ.
ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಪರಿಶೀಲನೆ ನಡೆಸಿದ್ದಾರೆ. 13 ಕ್ಕೂ ಅಧಿಕ ವಾಹನಗಳಲ್ಲಿ 60ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು 4 ತಂಡಗಳಾಗಿ ದಾಳಿ ನಡೆಸಿದ್ದಾರೆ. ಹಣ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಬಿಡಿಎ ಎಲ್ಲ ವಿಭಾಗಗಳ ಮೇಲೆ ದಾಳಿ ನಡೆಸಲಾಗಿದ್ದು, ಕಡತಗಳ ಪರಿಶೀಲನೆ ಮಾಡಲಾಗಿದೆ.
ಅವ್ಯವಹಾರಗಳ ಮಾಹಿತಿ, ದೂರು ಕೇಳಿಬಂದ ಹಿನ್ನೆಲೆಯಲ್ಲಿ ಮತ್ತು ನಿವೇಶನ ಪರಿಹಾರ ನೀಡುವಲ್ಲಿ ಅಕ್ರಮ ಹಿನ್ನಲೆ ಭೂಸ್ವಾದಿನ ವಿಭಾಗ, ಡಿಎಸ್ ಗಳ ವಿಭಾಗಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
ಎಸಿಬಿ ಎಸ್ಪಿಗಳಾದ ಅಬ್ದುಲ್ ಅಹದ್, ಉಮಾ ಪ್ರಶಾಂತ್, ಯತೀಶ್ ಚಂದ್ರ ನೇತೃತ್ವದಲ್ಲಿ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಕಚೇರಿಯಿಂದ ಯಾವ ಅಧಿಕಾರಿಯೂ ಹೊರಗೆ ಹೋಗದಂತೆ ಗೇಟ್ ಬಳಿ ಸಿಬ್ಬಂದಿಯನ್ನು ಕಾವಲಿಗೆ ಇಡಲಾಗಿದೆ. ಬಿಡಿಎ ಕಚೇರಿ ಮುಖ್ಯದ್ವಾರ ಬಂದ್ ಮಾಡಿ ಕಚೇರಿಯಿಂದ ಹೊರಗೆ ಹೋಗುವ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗಿದೆ.