ಸಂಬಳ ಪಡೆಯುವ ಉದ್ಯೋಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ. ಮನೆ ಬಾಡಿಗೆ ಭತ್ಯೆ ಮೇಲೆ ಆದಾಯ ತೆರಿಗೆ ರಿಯಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 (13A) ಅಡಿಯಲ್ಲಿ ಎಚ್ ಆರ್ ಎ ವಿನಾಯಿತಿ ಲಭ್ಯವಿದೆ.
ಬಾಡಿಗೆ ಮನೆಯಲ್ಲಿರುವವರು, ಬಾಡಿಗೆಯ ರಶೀದಿಯನ್ನು ಸಲ್ಲಿಸಬೇಕಾಗುತ್ತದೆ. ಆಗ ಎಚ್ ಆರ್ ಎ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇದಕ್ಕೆ ಮನೆ ಮಾಲೀಕನ ಪಾನ್ ಕಾರ್ಡ್ ನೀಡಬೇಕಾಗುತ್ತದೆ. ಯಾಕೆಂದ್ರೆ ಮನೆ ಬಾಡಿಗೆ, ಮನೆ ಮಾಲೀಕನ ಆದಾಯವಾಗಿರುತ್ತದೆ. ಆದ್ರೆ ಅನೇಕ ಬಾರಿ, ಮನೆ ಮಾಲೀಕ ಪಾನ್ ಕಾರ್ಡ್ ನೀಡುವುದಿಲ್ಲ. ಕೆಲವೊಮ್ಮೆ ಆತನ ಬಳಿ ಪಾನ್ ಕಾರ್ಡ್ ಇರುವುದಿಲ್ಲ. ಆಗ್ಲೂ ತೆರಿಗೆ ವಿನಾಯಿತಿ ಪಡೆಯಬಹುದು.
ವಾರ್ಷಿಕ ಮನೆ ಬಾಡಿಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಎಚ್ ಆರ್ ಎ ತೆರಿಗೆ ವಿನಾಯಿತಿಯ ಲಾಭ ಪಡೆಯಲು, ಮನೆ ಮಾಲೀಕನ ಪಾನ್ ಕಾರ್ಡ್ ನೀಡಬೇಕಾಗುತ್ತದೆ. ಆತನ ಬಳಿ ಪಾನ್ ಕಾರ್ಡ್ ಇಲ್ಲವೆಂದಾದ್ರೆ ಮಾಲೀಕನ ಹೆಸರು ಮತ್ತು ವಿಳಾಸದೊಂದಿಗೆ ಪಾನ್ ಕಾರ್ಡ್ ಲಭ್ಯವಿಲ್ಲ ಎಂಬ ಘೋಷಣೆ ಪತ್ರ ಸಲ್ಲಿಸಬೇಕಾಗುತ್ತದೆ.
ಬಾಡಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ, ಬಾಡಿಗೆ ರಸೀದಿಯೊಂದಿಗೆ ಭೂಮಾಲೀಕರ ಪಾನ್ ಸಂಖ್ಯೆಯನ್ನು ನೀಡಬೇಕಾಗಿಲ್ಲ.
ಮನೆ ಬಾಡಿಗೆ ಭತ್ಯೆ ಅಂದರೆ ಎಚ್ ಆರ್ ಎ, ಯಾವುದೇ ಸಂಬಳದ ವ್ಯಕ್ತಿಗೆ ನೀಡಲಾಗುವ ಭತ್ಯೆಯಾಗಿದೆ. ಉದ್ಯೋಗದಾತನು ತನ್ನ ಉದ್ಯೋಗಿಗೆ ತನ್ನ ಮನೆಯ ಬಾಡಿಗೆಯನ್ನು ಪಾವತಿಸಲು ಈ ಭತ್ಯೆಯನ್ನು ನೀಡುತ್ತಾನೆ. ಈ ಭತ್ಯೆ ತೆರಿಗೆಗೆ ಒಳಪಡುತ್ತದೆ.
ಸಂಬಳ ಪಡೆಯುವ ವ್ಯಕ್ತಿಯು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಭತ್ಯೆ ಪಡೆಯುತ್ತಿದ್ದರೆ ಮಾತ್ರ ಎಚ್ ಆರ್ ಎ ಮೇಲಿನ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಕುಟುಂಬದ ಯಾವುದೇ ಸದಸ್ಯರು ಮನೆ ಬಾಡಿಗೆ ಪಾವತಿ ಮಾಡುತ್ತಿದ್ದರೂ ಈ ವಿನಾಯಿತಿ ಸಿಗುತ್ತದೆ. ಉದ್ಯೋಗಿಗೆ ಸ್ವಂತ ಮನೆಯಿದ್ದು, ಆತ ಬೇರೆ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರೂ ಆತನಿಗೆ ತೆರಿಗೆ ರಿಯಾಯಿತಿ ಸಿಗುತ್ತದೆ.