ಭಾರತ-ನ್ಯೂಜಿಲೆಂಡ್ ಮಧ್ಯೆ ಎರಡನೇ ಟಿ-20 ಪಂದ್ಯ ಇಂದು ನಡೆಯಲಿದೆ. ಜಾರ್ಖಂಡದ ರಾಂಚಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಪಂದ್ಯ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕ್ರೀಡಾಂಗಣ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸದ ಯಾವುದೇ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶವಿಲ್ಲ.
ಕೊರೊನಾ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಕೂಡ ಜೆಎಸ್ಸಿಎಗೆ ವಿವರವಾದ ಮಾರ್ಗಸೂಚಿಯನ್ನು ಕಳುಹಿಸಿದೆ. ರಾಜ್ಯ ಸರ್ಕಾರ ಶೇಕಡಾ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ. ಆದ್ರೆ ಕಟ್ಟುನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಿದೆ.
ಜೆಎಸ್ಸಿಎಯ ಕೋರಿಕೆಯ ಮೇರೆಗೆ ರಾಂಚಿ ಮುನ್ಸಿಪಲ್ ಕಾರ್ಪೊರೇಶನ್, ಇಡೀ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದೆ. ಇದಕ್ಕಾಗಿ ರಾಂಚಿ ಮುನ್ಸಿಪಾಲ್, ಜೆಎಸ್ಸಿಎಗೆ ಶುಲ್ಕ ವಿಧಿಸಿದೆ. ಇಡೀ ಕ್ರೀಡಾಂಗಣ ಸ್ವಚ್ಛಗೊಳಿಸಿದ ಕಾರಣ ರಾಂಚಿ ಮುನ್ಸಿಪಲ್ ಕಾರ್ಪೊರೇಷನ್ 70 ಸಾವಿರ ರೂಪಾಯಿ ಶುಲ್ಕ ವಿಧಿಸಿದೆ.
ಕೊರೊನಾ ಸೋಂಕಿನ ಅಪಾಯದ ಹಿನ್ನೆಲೆಯಲ್ಲಿ ರಾಂಚಿ ಜಿಲ್ಲಾಡಳಿತದಿಂದ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಜೆಎಸ್ಸಿಎ ಪಾರ್ಕಿಂಗ್ ಸ್ಥಳದಲ್ಲಿ ಲಸಿಕೆ ಹಾಕಲಾಗುವುದು. ಆಧಾರ್ ಕಾರ್ಡ್ ತೋರಿಸುವ ಮೂಲಕ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದು. ಪಾರ್ಕಿಂಗ್ ಸ್ಥಳದಲ್ಲಿ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿ, 1-0ರ ಮುನ್ನಡೆ ಕಾಯ್ದುಕೊಂಡ ಟೀಂ ಇಂಡಿಯಾ ಮೇಲೆ ನಿರೀಕ್ಷೆ ಹೆಚ್ಚಿದೆ.