ನವದೆಹಲಿ: ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಮೋದಿ ಘೋಷಣೆ ಮಾಡಿದ್ದಾರೆ.
ರೈತರ ಆರ್ಥಿಕ ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು 3 ಕಾಯ್ದೆ ಜಾರಿಗೆ ತಂದಿದ್ದೇವೆ. ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೊಳಿಸಲಾಗಿದೆ. ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದೆ ಎನ್ನುತ್ತಿದ್ದ ಮೋದಿ ಸರ್ಕಾರ, ದಿಢೀರ್ ಬೆಳವಣಿಗೆಯಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವುದರೊಂದಿಗೆ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ರೈತರು ದೇಶಾದ್ಯಂತ ಹೋರಾಟ ಕೈಗೊಂಡಿದ್ದರು. ದೇಶಾದ್ಯಂತ ರೈತರು ನಂತರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ ಎನ್ನಲಾಗಿದ್ದರೂ, ಇದರ ಹಿಂದೆ ರೈತರ ಹೋರಾಟಕ್ಕಿಂತ ಹೆಚ್ಚಾಗಿ ರಾಜಕೀಯ ಲೆಕ್ಕಾಚಾರವೇ ಇದೆ. ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನ ಸಭೆ ಚುನಾವಣೆ ಸಮೀಪದಲ್ಲಿರುವ ಹಿನ್ನಲೆಯಲ್ಲಿ ಕಾಯ್ದೆ ವಾಪಸ್ ಪಡೆಯಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು, ಶೀಘ್ರವೇ ಉತ್ತರ ಪ್ರದೇಶ, ಪಂಜಾಬ್ ನಂತಹ ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ಘೋಷಣೆ ಆಗಲಿದೆ. ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ ಪ್ರಮುಖವಾಗಿ ಉತ್ತರದ ರಾಜ್ಯಗಳಲ್ಲಿ ಭಾರಿ ವಿರೋಧದೊಂದಿಗೆ ನಿರಂತರ ಪ್ರತಿಭಟನೆ ನಡೆಸಲಾಗಿದೆ. ದೊಡ್ಡ ರಾಜ್ಯ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಗೆಲುವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಪ್ರಮುಖವಾಗಿದೆ. ಇವೇ ಮೊದಲಾದ ರಾಜಕೀಯ ಲೆಕ್ಕಾಚಾರದ ಕಾರಣದಿಂದ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲಾಗಿದೆ ಎಂದು ಹೇಳಲಾಗಿದೆ.