ಸೌತ್ ಕೆರೊಲಿನಾ: ಚಿಕ್ಕ ಮಕ್ಕಳಿರುವಾಗ ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲುವುದಿಲ್ಲ. ತಿನ್ನುವ ಆಹಾರ ದೊಡ್ಡದಿತ್ತು ಅಂದ್ರೆ, ಗಂಟಲಿನಲ್ಲಿ ಸಿಲುಕಿದ್ರೆ ಅಪಾಯವಾಗುತ್ತೆ. ಹೀಗಾಗಿ ಮಕ್ಕಳಿಗೆ ತಿನ್ನಲು ಕೊಡುವಾಗ ನೋಡಿಕೊಂಡು ಕೊಡಬೇಕು. ಇಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಅಮೆರಿಕಾದ ಸೌತ್ ಕೆರೊಲಿನಾದ ರೆಸ್ಟೋರೆಂಟ್ನಲ್ಲಿ ಪ್ಯಾನ್ಕೇಕ್ ತಿಂದ 10 ತಿಂಗಳ ಮಗುವಿನ ಜೀವವನ್ನು ಅಪರಿಚಿತರೊಬ್ಬರು ರಕ್ಷಿಸಿದ್ದಾರೆ. ಮಗುವಿನ ಜೀವ ಉಳಿಸಲು ಅವರು ಲೈಫ್ವಾಕ್ ಎಂಬ ಸಾಧನವನ್ನು ಬಳಸಿದ್ದಾರೆ. ಈ ದೃಶ್ಯ ರೆಸ್ಟೋರೆಂಟ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗುವಿನ ಗಂಟಲಿನಲ್ಲಿ ಆಹಾರ ಸಿಕ್ಕಿಕೊಂಡ ಕೂಡಲೇ ತಾಯಿ ಮಮ್ ಜೇನ್ ಕೊಹ್ಲರ್ ಮಗುವನ್ನು ಉಲ್ಟಾ ಮಲಗಿಸಿ ಬೆನ್ನು ತಟ್ಟಿದ್ದಾರೆ. ಶೀಘ್ರದಲ್ಲೇ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ಕೂಡಲೇ ದಂಪತಿ ಸಹಾಯಕ್ಕಾಗಿ ಕಿರುಚಿದ್ದಾರೆ. ರೆಸ್ಟೋರೆಂಟ್ನಲ್ಲಿದ್ದ ಗ್ರಾಹಕರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ, ಆದರೆ ಏನೂ ಪ್ರಯೋಜನವಾಗಿಲ್ಲ. ಇನ್ನೂ ಕೆಲವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ.
ಈ ವೇಳೆ ರೆಸ್ಟೋರೆಂಟ್ನಲ್ಲಿದ್ದ ಮೇಜರ್ ಹಿಲಾರ್ಡ್ ಎಂಬಾತ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಕಾರಿನ ಕಡೆಗೆ ಓಡಿದ್ದಾನೆ. ಅಷ್ಟೇ ವೇಗದಲ್ಲಿ ವಾಪಸ್ ಬಂದ ಅವರು ಲೈಫ್ ವಾಕ್ ಅನ್ನು ತಂದಿದ್ದಾರೆ. ಇದು ಪೋರ್ಟಬಲ್ ಏರ್ವೇ-ಕ್ಲೀರಿಂಗ್ ಸಾಧನವಾಗಿದೆ.
ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಆಹಾರವನ್ನು ತೆಗೆಯಲು ಹಿಲಾರ್ಡ್ ಲೈಫ್ವಾಕ್ ಅನ್ನು ಬಳಸಿದ್ದಾರೆ. ಬಹಳ ಪ್ರಯತ್ನದ ಬಳಿಕ ಆಹಾರವನ್ನು ಹೊರತೆಗೆಯುವಲ್ಲಿ ಇವರು ಯಶಸ್ವಿಯಾಗಿದ್ದು, ಮಗು ಕೂಡ ಸರಾಗವಾಗಿ ಉಸಿರಾಡಿದೆ. ಮಗುವನ್ನು ರಕ್ಷಿಸಿದ್ದಕ್ಕೆ ದಂಪತಿ ಹಿಲಾರ್ಡ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸುಮಾರು ಐದು ವರ್ಷಗಳ ಕಾಲ ತನ್ನ ಕಾರಿನಲ್ಲಿ ಈ ಸಾಧನವನ್ನು ಹೊಂದಿದ್ದು, ಈ ಹಿಂದೆ ಯಾವುತ್ತೂ ಅದರ ಅಗತ್ಯ ಬಂದಿರಲಿಲ್ಲ ಎಂದು ಹಿಲಾರ್ಡ್ ಹೇಳಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಹಿಲಾರ್ಡ್ ಬುದ್ಧಿವಂತಿಕೆಯನ್ನು ಪ್ರಶಂಸಿದ್ದಾರೆ.