ಗುರುಗಿಂತಲೂ ದೊಡ್ಡ ಗಾತ್ರದ ಗ್ರಹವೊಂದು ಸೌರಮಂಡಲದ ಬಾಹ್ಯವರ್ತುಲದಲ್ಲಿ ಕಂಡಿರುವುದಾಗಿ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ (ಪಿಆರ್‌ಎಲ್) ಅಧ್ಯಯನ ತಂಡವೊಂದು ತಿಳಿಸಿದೆ.
ಸೂರ್ಯನ 1.5 ಪಟ್ಟು ಗಾತ್ರವಿರುವ ಬಾಹ್ಯ ನಕ್ಷತ್ರವೊಂದರ ಸುತ್ತ ಈ ಗ್ರಹ ಸುತ್ತುತ್ತಿದ್ದು, ಸೂರ್ಯನಿಂದ 725 ಜ್ಯೋತಿರ್ವರ್ಷದಷ್ಟು ದೂರದಲ್ಲಿದೆ ಎನ್ನಲಾಗಿದೆ.
ಪಿಆರ್‌ಎಲ್‌ನಲ್ಲಿರುವ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಿದ ಆಪ್ಟಿಕಲ್ ಫೈಬರ್ ಸ್ಪೆಕ್ಟೋಗಾಫ್ ಮೂಲಕ ಈ ಅನ್ವೇಷಣೆ ಮಾಡಲಾಗಿದೆ. ಈ ದೂರದರ್ಶಕವು 1.2 ಮೀಟರ್ ಎತ್ತರವಿದ್ದು, ಮೌಂಟ್ ಅಬು ವೀಕ್ಷಣಾಲಯದಲ್ಲಿವೆ. ಈ ದೂರದರ್ಶಕವು ದೇಶದಲ್ಲೇ ಮೊದಲ ರೀತಿದ್ದಾಗಿದೆ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಇರುವ ಪ್ರಯೋಗಾಲಯ ತಿಳಿಸಿದೆ.
ಈ ಗ್ರಹದ ಗಾತ್ರವು ಗುರುವಿನ 1.4 ಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಳತೆಗಳನ್ನು ಡಿಸೆಂಬರ್ 2020ರಿಂದ ಮಾರ್ಚ್ 2021ರ ನಡುವೆ ಮಾಡಲಾಗಿದೆ. ಇದಕ್ಕೆ ಪುಷ್ಟೀಕರಣದ ಅಳತೆಯನ್ನು ಜರ್ಮನಿಯ ಟಿಸಿಇಎಸ್ ಸ್ಪೆಕ್ಟೋಗ್ರಾಫ್ ಮೂಲಕ ಮಾಡಲಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಘಟನೆ ಅನ್ವಯ ಮೇಲ್ಕಂಡ ನಕ್ಷತ್ರವು ಎಚ್‌ಡಿ82139 ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಗ್ರಹವನ್ನು ಟಿಓಐ 1789ಬಿ ಅಥವಾ ಎಚ್‌ಡಿ 82139ಬಿ ಎಂದು ಹೆಸರಿಡಲಾಗಿದೆ.