ತನ್ನದೇ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಮುಂದಾದ ಪೊಲೀಸಪ್ಪನ ಮನಕಲಕುವ ಪಾಕಿಸ್ತಾನದ ಕಥೆಯೊಂದು ವೈರಲ್ ಆಗಿದೆ.
ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೋದಲ್ಲಿ ಕಾರಾಗೃಹ ಇಲಾಖೆಯ ನಿಸಾರ್ ಲಶರಿ ಎಂಬ ಹೆಸರಿನ ಈ ಪೇದೆ ಬೀದಿಯೊಂದರ ಮಧ್ಯದಲ್ಲಿ ನಿಂತುಕೊಂಡು ತನ್ನಿಬ್ಬರು ಮಕ್ಕಳನ್ನು ಹಿಡಿದುಕೊಂಡು ಗೊಂದಲದಲ್ಲಿದ್ದಾರೆ. ಇದರ ಬೆನ್ನಿಗೇ ತನ್ನ ಕಿರಿಯ ಮಗನನ್ನು ತೊಡೆಯ ಮೇಲೆ ಇರಿಸಿಕೊಂಡು, ತನ್ನ ಮಕ್ಕಳನ್ನು 50,000 ರೂ.ಗಳಿಗೆ ಮಾರುತ್ತಿರುವುದಾಗಿ ಕೂಗುವುದನ್ನು ನೋಡಬಹುದಾಗಿದೆ.
ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಲಶರಿಗೆ ರಜೆಯ ಅಗತ್ಯವಿತ್ತು. ಆದರೆ ರಜೆ ಬೇಕೆಂದರೆ ಲಂಚ ಕೊಡಬೇಕೆಂದು ಲಂಚ ನೀಡಲು ಲಶರಿಗೆ ಮೇಲಧಿಕಾರಿ ಬೇಡಿಕೆ ಇಟ್ಟಿದ್ದರು. ಬಾಸ್‌ಗೆ ಲಂಚ ನೀಡಲು ಸಾಧ್ಯವಾಗದೇ ಇದ್ದಾಗ, ಲಶರಿಯ ರಜೆಯ ಅರ್ಜಿ ರದ್ದು ಮಾಡಲಾಗಿದೆ. ಜೊತೆಗೆ ನಗರದಿಂದ 120 ಕಿಮೀ ದೂರದಲ್ಲಿರುವ ಲರ್ಕಾನಾ ಎಂಬ ಊರಿಗೆ ವರ್ಗಾವಣೆ ಮಾಡಲಾಗಿದೆ.
555 ರೇಜರ್ ನಷ್ಟು ಚೂಪಾಗಿರುತ್ತದೆ ಪರಭಕ್ಷಕ ಮೀನುಗಳ ಹಲ್ಲು: ಹೊಸ ಅಧ್ಯಯನದಿಂದ ಬಹಿರಂಗ
“ಲಂಚ ಕೊಡದೇ ಇದ್ದ ಕಾರಣಕ್ಕೆ ನನಗೆ ಈ ಶಿಕ್ಷೆ ಕೊಟ್ಟಿದ್ದೇಕೆ? ನಾನು ಬಹಳ ಬಡವನಾಗಿದ್ದು, ಕರಾಚಿಗೆ ಪ್ರಯಾಣಿಸಿ, ಕಾರಾಗೃಹ ಇಲಾಖೆಯ ಐಜಿಗೆ ದೂರು ನೀಡಲು ಸಹ ಆಗುತ್ತಿಲ್ಲ. ಇಲ್ಲಿನ ಶಕ್ತಿಶಾಲಿ ಜನರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮಗುವಿನ ಚಿಕಿತ್ಸೆಗಾಗಿ ಲಂಚ ನೀಡಬೇಕಾಗಿತ್ತೇ? ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗೆ ಕೊಂಡೊಯ್ಯಬೇಕಿತ್ತೇ?” ಎಂದು ಹತಾಶ ಪೇದೆ ಅಸಹಾಯಕರಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪೇದೆಯ ಪರಿಸ್ಥಿತಿಗೆ ಕಂಬನಿ ಮಿಡಿದಿದ್ದಾರೆ.