ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ವಿವಾಹ ಸಿಂಧುವಲ್ಲ ಎಂದು ಕೋಲ್ಕತ್ತಾದ ನ್ಯಾಯಾಲಯವೊಂದು ತೀರ್ಪಿತ್ತಿದೆ. ಮಾಜಿ ದಂಪತಿಗಳ ಜೀವನದಲ್ಲಿ ನಡೆದ ಮದುವೆ ಕಾನೂನಾತ್ಮಕವೇ ಅಲ್ಲ ಎಂದು ಕೋರ್ಟ್ ಹೇಳಿದೆ.
ಇದೇ ವರ್ಷದ ಜೂನ್ 9ರಂದು ಹೇಳಿಕೆ ಬಿಡುಗಡೆ ಮಾಡಿದ್ದ ನುಸ್ರತ್ ಜಹಾನ್, ನಿಖಿಲ್ ಜೊತೆಗಿನ ತನ್ನ ವಿವಾಹ ಟರ್ಕಿಯ ಕಾನೂನಿನ ಅನ್ವಯವಾಗಿದ್ದು ಭಾರತದಲ್ಲಿ ಸಿಂಧುವಲ್ಲ ಎಂದಿದ್ದರು. ತನಗೆ ಸೇರಿದ್ದ ಒಡವೆಗಳು ಹಾಗೂ ಇತರೆ ವಸ್ತುಗಳನ್ನು ಅಕ್ರಮವಾಗಿ ಕಿತ್ತುಕೊಳ್ಳಲಾಗಿದೆ ಎಂದು ನುಸ್ರತ್ ಇದೇ ವೇಳೆ ಆಪಾದಿಸಿದ್ದರು. ಅಲ್ಲದೇ ತನ್ನ ಖಾತೆಯಲ್ಲಿರುವ ದುಡ್ಡು ’ದುರ್ಬಳಕೆ’ ಮಾಡಲಾಗಿದೆ ಎಂದು ಸಹ ಆಪಾದಿಸಿದ್ದರು ಸಂಸದೆ.
ಕೆಲ ಕಾಲದವರೆಗೂ ಡೇಟಿಂಗ್ ಮಾಡಿದ ನುಸ್ರತ್ ಹಾಗೂ ನಿಖಿಲ್ ಜೈನ್ ಜೂನ್ 19, 2019ರಲ್ಲಿ ಟರ್ಕಿಯಲ್ಲಿ ಮದುವೆ ಮಾಡಿಕೊಂಡಿದ್ದರು. ಇದಾದ ಬಳಿಕ ಕೋಲ್ಕತ್ತಾದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು ಈ ಜೋಡಿ.
ಕಳೆದೊಂದು ವರ್ಷದಿಂದ ಜೋಡಿಯ ನಡುವೆ ಬಿರುಕು ಬಿಟ್ಟಿದ್ದು, ಇಬ್ಬರೂ ಪರಸ್ಪರರ ವಿರುದ್ಧ ಆಪಾದನೆ ಮಾಡಿಕೊಳ್ಳುವ ವಿಚಾರಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.
“ಕಳೆದ ನವೆಂಬರ್‌ನಿಂದ ನಾವಿಬ್ಬರೂ ಪ್ರತ್ಯೇಕಗೊಂಡಿದ್ದು, ನಮ್ಮ ವಿವಾಹದ ಸಮಾಪ್ತಿಗೆ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ,” ಎಂದು ನಿಖಿಲ್ ಹೇಳಿಕೊಂಡಿದ್ದರು.
“ಅರ್ಜಿದಾರರು ಹಾಗೂ ಎದುರುದಾರರ ನಡುವೆ ಟರ್ಕಿಯ ಬೋಡ್ರುಂನಲ್ಲಿ 19 ಜೂನ್ 2019ರಲ್ಲಿ ನಡೆದಿದೆ ಎಂದು ಹೇಳಲಾದ ಮದುವೆಯು ಸಿಂಧುವಾಗಿಲ್ಲ. ಹೀಗಾಗಿ, ಈ ಪ್ರಕರಣವನ್ನು ವಜಾಗೊಳಿಸಲಾಗಿದೆ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.