ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮಹಿಳಾ ನೌಕರರಿಗೆ ಸೇವಾವಧಿಯಲ್ಲಿ 180 ದಿನಗಳ ಶಿಶುಪಾಲನಾ ರಜೆ ಮಂಜೂರು ಮಾಡಲಾಗಿದೆ.
ಈ ಕುರಿತಂತೆ ಶಿಕ್ಷಣ ಇಲಾಖೆಯಲ್ಲಿ ಉಂಟಾದ ಗೊಂದಲಕ್ಕೆ ಸರ್ಕಾರ ಸ್ಪಷ್ಟನೆ ನೀಡಿದೆ. ಒಂದೇ ಶಾಲೆಯ ಒಬ್ಬರಿಗಿಂತ ಹೆಚ್ಚು ಶಿಕ್ಷಕಿಯರು ಅರ್ಜಿ ಸಲ್ಲಿಸುವ ಹಿನ್ನೆಲೆಯಲ್ಲಿ ಇಬ್ಬರು ಮಹಿಳಾ ಶಿಕ್ಷಕರು ರಜೆ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಕಿರಿಯ ವಯಸ್ಸಿನ ಮಗುವಿನ ಶಿಕ್ಷಕಿಗೆ ಸೇವಾ ಪುಸ್ತಕದಲ್ಲಿ ನಮೂದಿಸಿದ ಮಕ್ಕಳ ವಿವರಗಳ ಆಧಾರದ ಮೇಲೆ ರೊಟೇಷನ್ ಪದ್ಧತಿಯಲ್ಲಿ ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ.
ತಾಲೂಕಿನಲ್ಲಿ ರಜೆ ಮಂಜೂರಾತಿ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಅರ್ಹತೆ ಆಧಾರದ ಮೇಲೆ ಪರಿಗಣಿಸಿ ಮಂಜೂರಾತಿಗೆ ಪ್ರಾಧಿಕಾರ ಕ್ರಮವಹಿಸಬೇಕು. ಈ ರಜೆ ಸೌಲಭ್ಯವನ್ನು ಹಕ್ಕು ಎಂದು ಪರಿಗಣಿಸಿ ಕ್ಲೇಮ್ ಮಾಡಲು ಅವಕಾಶ ಇಲ್ಲ. ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ರಜೆ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಏಕೋಪಾಧ್ಯಾಯ ಶಾಲೆ ಮತ್ತು ಶಿಕ್ಷಕರ ಕೊರತೆ ಇರುವ ಶಾಲೆಗಳ ಶಿಕ್ಷಕಿಯರು ರಜೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ರಜೆ ಮಂಜೂರಾತಿಗೆ ಕ್ರಮ ಕೈಗೊಳ್ಳಬಹುದು. ಶಿಶುಪಾಲನಾ ರಜೆ ಮಂಜೂರಾತಿ ಪ್ರತಿಬಾರಿಯೂ ಕನಿಷ್ಠ 15 ದಿನ ಮತ್ತು ಗರಿಷ್ಠ 30 ದಿನ ಮೀರದಂತೆ ಇರಬೇಕು ಎನ್ನಲಾಗಿದೆ.