ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ನಾಲ್ಕು ತಂಡಗಳಿಂದ ಜನ ಸ್ವರಾಜ್ ಯಾತ್ರೆ ಕೈಗೊಳ್ಳಲಾಗಿದೆ.
ಕಾರ್ಯಕರ್ತರೊಂದಿಗೆ ಸಮಾಲೋಚನೆ, ಸಂಘಟನೆಯ ಬಲವರ್ಧನೆ ಉದ್ದೇಶದಿಂದ ಬಿಜೆಪಿ ಜನ ಸ್ವರಾಜ್ ಯಾತ್ರೆ ಹಮ್ಮಿಕೊಂಡಿದ್ದು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಯಾತ್ರೆ ಕೈಗೊಂಡಿದೆ. ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದ ತಂಡ ಕೊಪ್ಪಳದಿಂದ ಜನ ಸ್ವರಾಜ್ ಯಾತ್ರೆ ಕೈಗೊಂಡಿದ್ದು, ಇಂದು ಕೊಪ್ಪಳದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ.
ಸಚಿವ ಈಶ್ವರಪ್ಪ ನೇತೃತ್ವದ ತಂಡ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದು, ಜಗದೀಶ್ ಶೆಟ್ಟರ್ ನೇತೃತ್ವದ ತಂಡ ದಾವಣಗೆರೆ, ಚಿತ್ರದುರ್ಗ, ತುಮಕೂರು ಮೊದಲಾದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದೆ.